ಭಾನುವಾರ ತುಂಬಾ ಈಸಿಯಾಗಿ ಮನೆಯಲ್ಲೇ ಮಾಡಿ ರುಚಿಕರವಾದ ಮಟನ್ ಕರಿ

ಭಾನುವಾರ ತುಂಬಾ ಈಸಿಯಾಗಿ ಮನೆಯಲ್ಲೇ ಮಾಡಿ ರುಚಿಕರವಾದ ಮಟನ್ ಕರಿ

ಸಾಕಷ್ಟು ಜನಕ್ಕೆ ಮಟನ್ ಅಂದ್ರೆ ಪ್ರಾಣ..  ಕುಟುಂಬ ಸಮೇತ ಒಟ್ಟಾಗಿ ಕುಳಿತು  ತಿನ್ನೋ ಒಂದು ಮಟನ್ ರೆಸಿಪಿ ಮಾಡೋದ್ ಹೇಗೆ? ಮೃದುವಾಗಿ ಬೆಂದ, ದಟ್ಟವಾದ ಗ್ರೇವಿಯನ್ನೊಳಗೊಂಡ ಮಸಾಲೆಯುಕ್ತ ಮಟನ್ ಕರಿ ತಯಾರಿಸುವ ವಿಧಾನ  ಹೇಗೆ ಮತ್ತು ಬೇಕಾಗುವ ಪದಾರ್ಥಗಳು ಯಾವುದು ಅನ್ನೋದ್ದನ್ನ ನೋಡೋಣ ಬನ್ನಿ.

 ಮಟನ್ ಕರಿ ತಯಾರಿಸಲು ಬೇಕಾಗುವ ಪದಾರ್ಥಗಳು

• ಮಟನ್

• ಈರುಳ್ಳಿ

• ಟೊಮೆಟೊ

ಮ್ಯಾರಿನೇಷನ್‌ಗಾಗಿ ಪದಾರ್ಥಗಳು

• ಮೊಸರು

• ಶುಂಠಿ-ಬೆಳ್ಳುಳ್ಳಿ ಪೇಸ್ಟ್

• ಹಸಿ ಮೆಣಸಿನಕಾಯಿ

ಮಸಾಲೆ ಪುಡಿಗಳು

• ಅರಿಶಿಣ

• ಖಾರದ ಪುಡಿ

• ಧನಿಯಾ ಪುಡಿ

• ಗರಂ ಮಸಾಲಾ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು

• ಎಣ್ಣೆ

• ತೇಜಪತ್ರ (ಬಿರಿಯಾನಿ ಎಲೆ)

• ಲವಂಗ

• ಏಲಕ್ಕಿ

• ಉಪ್ಪು

• ಕೊತ್ತಂಬರಿ ಸೊಪ್ಪು

ಮಟನ್ ಕರಿ ತಯಾರಿಸುವ ಸರಳ ವಿಧಾನ

ಮಟನ್ ಮೃದುವಾಗಿ ಬೇಯಲು ಮ್ಯಾರಿನೇಷನ್ ಅತ್ಯಗತ್ಯ. ಸ್ವಚ್ಛಗೊಳಿಸಿದ ಮಟನ್‌ಗೆ ಮೊಸರು, ಸ್ವಲ್ಪ ಅರಿಶಿಣ, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ಹಾಗೆಯೇ ಇಡಿ. ಇದರಿಂದ ಮಸಾಲೆ ಮಾಂಸಕ್ಕೆ ಚೆನ್ನಾಗಿ ಹಿಡಿಯುತ್ತದೆ. – ಕುಕ್ಕರ್ ಅನ್ನು ಬಿಸಿ ಮಾಡಿ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ತೇಜಪತ್ರ, ಲವಂಗ ಮತ್ತು ಏಲಕ್ಕಿ ಸೇರಿಸಿ, ಅವುಗಳ ಸುವಾಸನೆ ಬಿಡುವವರೆಗೆ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ, ಅದು ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಫ್ರೈ ಮಾಡಿ. – ಈರುಳ್ಳಿ ಚೆನ್ನಾಗಿ ಬೆಂದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಅನಂತರ ಟೊಮೆಟೊ ಪ್ಯೂರಿ ಹಾಕಿ, ಎಣ್ಣೆ ಬಿಟ್ಟುಕೊಳ್ಳುವವರೆಗೆ ಚೆನ್ನಾಗಿ ಬೇಯಿಸಿ. ಈಗ ಧನಿಯಾ ಪುಡಿ ಮತ್ತು ಉಳಿದ ಮಸಾಲೆ ಪುಡಿಗಳನ್ನು ಸೇರಿಸಿ ಮಿಕ್ಸ್ ಮಾಡಿ. ಮಸಾಲೆಗೆ ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ, ಸುಮಾರು 5-7 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಒಂದು ಕಪ್ ನೀರು ಸೇರಿಸಿ, ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಮಟನ್ ಸಂಪೂರ್ಣವಾಗಿ ಮೃದುವಾಗಿ ಬೇಯಲು 4 ರಿಂದ 5 ಸೀಟಿ ಬರುವವರೆಗೆ ಬೇಯಿಸಬೇಕು. – ಕುಕ್ಕರ್‌ನ ಒತ್ತಡ ಸಂಪೂರ್ಣವಾಗಿ ಕಡಿಮೆಯಾದ ನಂತರ ಮುಚ್ಚಳ ತೆಗೆಯಿರಿ. ಅಂತಿಮವಾಗಿ, ಗರಂ ಮಸಾಲ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಗ್ರೇವಿ ತೆಳುವಾಗಿದೆ ಎಂದು ಅನಿಸಿದರೆ, ಸಣ್ಣ ಉರಿಯಲ್ಲಿ ಇನ್ನಷ್ಟು ಸಮಯ ಕುದಿಸಿ ಅದರ ಸಾಂದ್ರತೆಯನ್ನು ಹೆಚ್ಚಿಸಬಹುದು.

Kishor KV

Leave a Reply

Your email address will not be published. Required fields are marked *