ಏಳು ವರ್ಷಗಳ ಬಳಿಕ ರಣಜಿ ಟ್ರೋಫಿ ಗೆದ್ದ ಮುಂಬೈ – ವಿದರ್ಭ ತಂಡಕ್ಕೆ ಭಾರೀ ನಿರಾಸೆ

ಏಳು ವರ್ಷಗಳ ಬಳಿಕ ರಣಜಿ ಟ್ರೋಫಿ ಗೆದ್ದ ಮುಂಬೈ – ವಿದರ್ಭ ತಂಡಕ್ಕೆ ಭಾರೀ ನಿರಾಸೆ

ಏಳು ವರ್ಷಗಳ ಬಳಿಕ ಮತ್ತೊಮ್ಮೆ ಗತವೈಭದ ರಣಜಿ ಟ್ರೋಫಿಯನ್ನು ಗೆಲ್ಲುವಲ್ಲಿ ಮುಂಬೈ ತಂಡ ಯಶಸ್ವಿಯಾಗಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಮುಂಬೈ ತಂಡವು 42ನೇ ಬಾರಿ ರಣಜಿ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್‌ ಕ್ಯಾಪ್ಟನ್ ಆಗಲಿ..!- ಐಪಿಎಲ್ ವಿಚಾರದಲ್ಲಿ ಹಿಟ್‌ಮ್ಯಾನ್ ಫುಲ್ ಸೈಲೆಂಟ್

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಮುಂಬೈ 169 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 224 ರನ್‌ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡವು ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.

ಮುಂಬೈ ಪರ ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಮತ್ತು ಧವಳ್ ಕುಲ್ಕರ್ಣಿ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಮುಂಬೈ ಪರ ಯುವ ದಾಂಡಿಗ ಮುಶೀರ್ ಖಾನ್ (136) ಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 95 ರನ್‌ಗಳ ಕೊಡುಗೆ ನೀಡಿದರು. ಹಾಗೆಯೇ ಶಮ್ಸ್ ಮುಲಾನಿ 50 ರನ್ ಬಾರಿಸಿ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 418 ರನ್ ಕಲೆಹಾಕಿತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 538 ರನ್‌ಗಳ ಗುರಿ ಪಡೆದಿರುವ ವಿದರ್ಭ ತಂಡಕ್ಕೆ ಈ ಬಾರಿ ಕರುಣ್ ನಾಯರ್ ಆಸರೆಯಾದರು. 74 ರನ್‌ಗಳನ್ನು ಬಾರಿಸುವ ಮೂಲಕ ಕರುಣ್ ನಾಲ್ಕನೇ ದಿನದಾಟದ ವೇಳೆ ವಿದರ್ಭ ತಂಡದ ಸ್ಕೋರ್ ಅನ್ನು 200 ರ ಗಡಿದಾಟಿಸಿ ವಿಕೆಟ್ ಒಪ್ಪಿಸಿದರು.

ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ವಿದರ್ಭ ತಂಡವು 5 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿದ್ದ ವಿದರ್ಭ ಪರ ಐದನೇ ದಿದನಾಟದಲ್ಲಿ ಅಕ್ಷಯ್ ವಾಡ್ಕರ್ (102) ಹಾಗೂ ಹರ್ಷ್ ದುಬೆ (65) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಇವರಿಬ್ಬರ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮುಂಬೈ ಬೌಲರ್‌ಗಳು ವಿದರ್ಭ ತಂಡವನ್ನು 368 ರನ್‌ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಮುಂಬೈ ತಂಡವು 169 ರನ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Sulekha