ಇಂದು ನಗರದಲ್ಲಿ ಹಾರ್ನ್‌ ಹೊಡೆಯುವಂತಿಲ್ಲ! – ಟ್ರಾಫಿಕ್‌ ಪೊಲೀಸರಿಂದ ವಿಶೇಷ ಆಂದೋಲನ

ಇಂದು ನಗರದಲ್ಲಿ ಹಾರ್ನ್‌ ಹೊಡೆಯುವಂತಿಲ್ಲ! – ಟ್ರಾಫಿಕ್‌ ಪೊಲೀಸರಿಂದ ವಿಶೇಷ ಆಂದೋಲನ

ಮುಂಬೈ: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಒಂದೆಡೆ ಗಂಟೆ ಗಟ್ಟಲೆ ಟ್ರಾಫಿಕ್‌ ಮಧ್ಯೆ ನಿಲ್ಲುವಂತಾಗಿದ್ದರೆ, ಇನ್ನೊಂಡೆದೆ ಹಾರ್ನ್‌ ಶಬ್ದದಿಂದ ಕಿರಿ ಕಿರಿ ಅನುಭವಿಸುವಂತಾಗಿದೆ. ವಾಹನಗಳ ಹಾರ್ನ್‌ ಶಬ್ದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಇದೀಗ ಮುಂಬೈನಲ್ಲಿ 17 ವರ್ಷಗಳ ಬಳಿಕ ಮತ್ತೆ ನೋ ಹಾರ್ನ್ ಡೇ ಆಚರಣೆ ಜಾರಿಗೆ ಬರುತ್ತಿದೆ!

ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 600 ಕೆಜಿ ಮಾವಿನಹಣ್ಣು ಕಳಿಸಿದ ಬಾಂಗ್ಲಾ ಪ್ರಧಾನಿ!

ನಗರ ಪ್ರದೇಶದಲ್ಲಿ ಹಲವು ವಾಹನ ಸವಾರರು ಅನಗತ್ಯ ಹಾರ್ನ್ ಬಳಕೆ ಮಾಡಿ ಮತ್ತಷ್ಟು ಶಬ್ದ ಮಾಲಿನ್ಯಕ್ಕೆ ಕಾರಣರಾಗುತ್ತಾರೆ. ಹೀಗಾಗಿ ಮುಂಬೈ ಟ್ರಾಫಿಕ್ ಪೊಲೀಸರು ನೋ ಹಾರ್ನ್ ಡೇ ಆಚರಣೆಗೆ ಮುಂದಾಗಿದ್ದಾರೆ. ಇಂದು ನೋ ಹಾರ್ನ್ ಡೇ ಪ್ರಯೋಗ ಜಾರಿಯಾಗುತ್ತಿದೆ. ಈ ದಿನ ಎಲ್ಲಾ ವಾಹನ ಸವಾರರು ಹಾರ್ನ್ ಬಳಕೆ ಮಾಡದಂತೆ ಸಹಕರಿಸಲು ಪೊಲೀಸರು ಮನವಿ ಮಾಡಿದ್ದಾರೆ. ಈ ಮೂಲಕ ಪರಿಸರಕ್ಕೆ ಪೂರಕವಾಗಿ ಸಾಗುವ ವಿಶೇಷ ಪ್ರಯತ್ನಕ್ಕೆ ಮುಂಬೈ ಪೊಲೀಸರು ಮುಂದಾಗಿದ್ದಾರೆ.

ಮುಂಬೈನಲ್ಲಿ ಪ್ರತಿ ದಿನ 43 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತದೆ. ಹೀಗಾಗಿ  ವಾಹನ ಶಬ್ದ ಮಾಲಿನ್ಯ ಅತಿಯಾಗಿದೆ. ಬೆಂಗಳೂರು, ದೆಹಲಿ ಸೇರಿದಂತೆ ಬಹುತೇಕ ನಗರದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಅತಿಯಾಗುತ್ತಿದೆ. ಹೀಗಾಗಿ ಮುಂಬೈ ಪೊಲೀಸರು 17 ವರ್ಷಗಳ ಬಳಿಕ ಮತ್ತೆ ನೋ ಹಾರ್ನ್ ಡೇ ಆಚರಣೆಗೆ ಮುಂದಾಗಿದ್ದಾರೆ. 2006ರಲ್ಲಿ ಮುಂಬೈನಲ್ಲಿ ನೋ ಹಾರ್ನ್ ಡೇ ಆಂದೋಲನ ಆರಂಭಿಸಲಾಗಿತ್ತು. ಆದರೆ ಈ ಆಂದೋಲನ ಯಶಸ್ವಿಯಾಗಿ ಮುನ್ನಡೆಯಲಿಲ್ಲ. ಇದೀಗ ಮತ್ತೆ ಪೊಲೀಸರು ಶಬ್ದ ಮಾಲಿನ್ಯ ತಡೆಗಟ್ಟಲು ಮುಂದಾಗಿದ್ದಾರೆ.

ಬುಧವಾರ ಮುಂಬೈ ನಗರದಲ್ಲಿ ನೋ ಹಾರ್ನ್‌ ಡೇ ನಡೆಸಲಾಗುತ್ತಿದೆ. ಈ ಹಿನ್ನೆಲೆ ನಗರದ ಎಲ್ಲಾ ಕಾರು, ಬಸ್‌, ಬೈಕ್, ಮಿನಿ ಟ್ರಕ್ ಸೇರಿದಂತೆ ಎಲ್ಲಾ ವಾಹನ ಚಾಲಕರು ಹಾರ್ನ್ ಬಳಕೆ ಮಾಡಬೇಡಿ. ಆದರೆ ಆ್ಯಂಬುಲೆನ್ಸ್,  ಅಗ್ನಿಶಾಮಕ ದಳ ಹಾಗೂ ತುರ್ತು ವಾಹನ ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಹನಗಳು ಹಾರ್ನ್ ಬಳಕೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮುಂಬೈ ಪೊಲೀಸರ ಈ ಹೊಸ ಪ್ರಯತ್ನವನ್ನು ಹಲವು ಪರಿಸರ ಹೋರಾಟ ಸಂಘಟನೆಗಳು ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿವೆ. ಆರಂಭಿಕ ಹಂತದಲ್ಲಿ ಒಂದು ದಿನ ನೋ ಹಾರ್ನ್ ಡೇ ಆಚರಣೆ ಇದೆ. ಇದು ವಾರದ ಎಲ್ಲಾ ದಿನ ಬರುವಂತಾಗಲಿ. ಜಾಗರೂಕತೆಯಿಂದ, ಟ್ರಾಫಿಕ್ ನಿಮಯ ಪಾಲಸಿ ವಾಹನ ಚಲಾಯಿಸಿ, ಶಬ್ದ ಮಾಲಿನ್ಯ ತಗ್ಗಿಸಿ ಎಂದು ಪರಿಸರ ಹೋರಾಟ ಸಂಘಟನೆಗಳು ಮನವಿ ಮಾಡಿದೆ.

1989ರ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯದಂತೆ ಹಾರ್ನ್ ಶಬ್ದದಲ್ಲಿ ನಿಯಮ ಉಲ್ಲಂಘನೆ ಮಾಡಬಾರದು. ಮುಂಬೈ ನಗರದಲ್ಲಿನ ವಾಹನಗಳ ಶಬ್ದವೇ ವಿಪರೀತವಾಗಿದೆ. ಇದರ ಜೊತೆಗೆ ಹಾರ್ನ್ ಶಬ್ದದಿಂದ ಶಬ್ದ ಮಾಲಿನ್ಯದ ತೀವ್ರತೆ ಹೆಚ್ಚಾಗಿದೆ. ನಗರದಲ್ಲಿ ನಿಗದಿತ ಡೆಸಿಬಲ್‌ ಗಿಂತ ಹೆಚ್ಚಿನ ಶಬ್ದವಿರುವ ಹಾರ್ನ್‌ ಬಳಕೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ವಾಹನ ಸವಾರರು ನಿಯಮ ಪಾಲನೆಯತ್ತ ಗಮನಹರಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

suddiyaana