ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ – ಓರ್ವ ಅರೆಸ್ಟ್

ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ – ಓರ್ವ ಅರೆಸ್ಟ್

ಮುಂಬೈ: ಸಿಗ್ನಲ್ ಜಂಪ್ ಮಾಡಿದ್ದನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ವ್ಯಕ್ತಿಗಳಿಬ್ಬರು ಮನಬಂದಂತೆ ಥಳಿಸಿರುವ ಘಟನೆ ಮುಂಬೈನ ಕುರ್ಲಾ ಪ್ರದೇಶದಲ್ಲಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಕೇಶ್ (36) ಹಾಗೂ ರಮೇಶ್ ಠಾಕೂರ್ ಕುರ್ಲಾ ಪಶ್ಚಿಮದ ಎಲ್ ಬಿ ರಸ್ತೆಯ ಕುರ್ಲಾ ಡಿಪೋ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸಿಗ್ನಲ್ ಜಂಪ್ ಮಾಡಿದ್ದಾರೆ. ಅಲ್ಲದೇ ಅವರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಹೀಗಾಗಿ ಅವರನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪತ್ತೆಯಾಯ್ತು ಅಪರೂಪದ ಬಿಳಿ ಜಿಂಕೆ – ಕುತೂಹಲ ಮೂಡಿಸುತ್ತಿದೆ  ಅಲ್ಬಿನೋ ಜಿಂಕೆ ಫೋಟೋ  

ಈ ವೇಳೆ ಇಬ್ಬರೂ ಪೊಲೀಸರ ಬಳಿ ಜಗಳ ಶುರು ಮಾಡಿದ್ದರು. ಇ-ಚಲನ್ ಮೂಲಕ ದಂಡ ವಿಧಿಸಬೇಡಿ ಎಂದು ಒತ್ತಾಯಿಸಿದ್ದಾರೆ. ಆದರೆ ರಮೇಶ್  ಠಾಕೂರ್ ಇ-ಚಲನ್ ಸಾಧನದಲ್ಲಿ ಅವರ ಚಿತ್ರವನ್ನು ಕ್ಲಿಕ್ ಮಾಡಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಯೇ ನಿಲ್ಲಿಸಿದ್ದ ಬೈಕ್ ಮೇಲೆ ಅವರನ್ನು ತಳ್ಳಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಮೇಶ್ ಠಾಕೂರ್ ಕೂಡಲೇ ಕುರ್ಲಾ ಪೊಲೀಸರನ್ನು ಸಂಪರ್ಕಿಸಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ರವೀಂದ್ರ ಹೂವಾಲೆ ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಾಹಿಮ್ ನಿವಾಸಿ ಖಾಲಿದ್ ಐಸಾಕ್ ವಸಿಕರ್ (53) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

suddiyaana