ಏರುತ್ತಿರುವ ಸಮುದ್ರ ಮಟ್ಟ – ಮುಂಬೈನಿಂದ ನ್ಯೂಯಾರ್ಕ್‌ವರೆಗೂ ಅಪಾಯ!
ಏರುತ್ತಿರುವ ಸಮುದ್ರ ಮಟ್ಟದಿಂದ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಮಾತನಾಡಿರುವ ಗುಟೆರಸ್, ಹವಾಮಾನ ಬಿಕ್ಕಟ್ಟು ಸಮುದ್ರಗಳ ಏರಿಕೆಗೆ ಮೂಲ ಕಾರಣ. ಸಣ್ಣ ದ್ವೀಪ, ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳು ಮತ್ತು ಪ್ರಪಂಚದಾದ್ಯಂತ ಇತರ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನೂರು ಮಿಲಿಯನ್ ಗೂ ಹೆಚ್ಚು ಜನರಿಗೆ ಇದು ನೈಸರ್ಗಿಕ ಎಚ್ಚರಿಕೆಯಾಗಿದೆ. ಸಮುದ್ರಗಳು ತಗ್ಗು ಪ್ರದೇಶದ ಅಸ್ತಿತ್ವಕ್ಕೆ ಅಪಾಯ ಉಂಟುಮಾಡುತ್ತವೆ. ಅಲ್ಲದೇ ಭವಿಷ್ಯವನ್ನು ಮುಳುಗಿಸುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭೂಕಂಪದ ಮುನ್ಸೂಚನೆ ನೀಡುವ ಉಪಗ್ರಹ ರೆಡಿ – ಯಾವಾಗ ಉಡಾವಣೆ.. ಹೇಗಿದೆ ಸಿದ್ಧತೆ..!?
ಕಳೆದ 3,000 ವರ್ಷಗಳಿಗೆ ಹೋಲಿಸಿದರೆ 1900 ರಿಂದ ಜಾಗತಿಕ ಸರಾಸರಿ ಸಮುದ್ರ ಮಟ್ಟವು ವೇಗವಾಗಿ ಏರಿಕೆಯಾಗುತ್ತಿದೆ. ತಾಪಮಾನವು 2 ಡಿಗ್ರಿಗಳಷ್ಟು ಏರಿಕೆಯಾದರೆ ಸಮುದ್ರ ಮಟ್ಟ ಇನ್ನೂ ದ್ವಿಗುಣಗೊಳ್ಳಬಹುದು. ಹಾಗಾಗಿ ಬಾಂಗ್ಲಾದೇಶ, ಚೀನಾ, ಭಾರತ ಮತ್ತು ನೆದರ್ಲ್ಯಾಂಡ್‌ನಂತಹ ದೇಶಗಳು ಅಪಾಯದಲ್ಲಿವೆ ಎಂದು ಅವರು ಹೇಳಿದ್ದಾರೆ.
ಇನ್ನು ಮೆಗಾ ಸಿಟಿಗಳಾದ ಕೈರೋ, ಲಾಗೋಸ್, ಮಾಪುಟೊ, ಬ್ಯಾಂಕಾಕ್, ಢಾಕಾ, ಜಕಾರ್ತ, ಮುಂಬೈ, ಶಾಂಘೈ, ಕೋಪನ್‌ಹೇಗನ್, ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಬ್ಯೂನಸ್ ಐರಿಸ್ ಮತ್ತು ಸ್ಯಾಂಟಿಯಾಗೊ ಸೇರಿದಂತೆ ಪ್ರತಿ ಖಂಡದ ಮೆಗಾ ಸಿಟಿಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಡಿಮೆ ಎತ್ತರದಲ್ಲಿ ಕರಾವಳಿ ವಲಯಗಳಲ್ಲಿ ವಾಸಿಸುವ ಸುಮಾರು 900 ಮಿಲಿಯನ್ ಜನರಿಗೆ ಎಚ್ಚರಿಕೆಯಾಗಿದೆ. ಕೆಲವು ಕರಾವಳಿಗಳು ಈಗಾಗಲೇ ಸಮುದ್ರ ಮಟ್ಟ ಏರಿಕೆಯ ಸರಾಸರಿ ದರವನ್ನು ಮೂರು ಪಟ್ಟು ಹೆಚ್ಚಿಸಿವೆ ಎಂದು ಹೇಳಿದ್ದಾರೆ.