ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಓಕೆ – ಸೂರ್ಯ, ತಿಲಕ್ ಯಾಕೆ? – ಮುಂಬೈ ಮ್ಯಾನೇಜ್ಮೆಂಟ್ ಖಡಕ್ ಎಚ್ಚರಿಕೆ

ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಓಕೆ – ಸೂರ್ಯ, ತಿಲಕ್ ಯಾಕೆ? – ಮುಂಬೈ ಮ್ಯಾನೇಜ್ಮೆಂಟ್ ಖಡಕ್ ಎಚ್ಚರಿಕೆ

ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಈಗಿನ ಸ್ಥಿತಿ ನೋಡಿದರೆ ಫ್ಯಾನ್ಸ್ ಅಯ್ಯೋ ಅನ್ನುತ್ತಿದ್ದಾರೆ. ಅದರಲ್ಲೂ ಈ ಸೀಸನ್‌ನಲ್ಲಿ ಮುಂಬೈ ತಂಡದ ಪ್ರದರ್ಶನ ಅಷ್ಟಕಷ್ಟೇ. ಇದಕ್ಕೆಲ್ಲಾ ಹಾರ್ದಿಕ್ ಪಾಂಡ್ಯ ನಾಯಕತ್ವ ಕಾರಣ ಅಂತಾ ಕೆಲವು ದೂರಿದರೆ, ಮುಂಬೈ ಮ್ಯಾನೇಜ್‌ಮೆಂಟ್ ಇಬ್ಬರು ಆಟಗಾರರ ಮೇಲೆ ಕಿಡಿಕಾರಿದೆ.

ಇದನ್ನೂ ಓದಿ:ಸತತ ಸೋಲು ತಪ್ಪಿಸುತ್ತಾ RCB – LSG ಪಂದ್ಯಕ್ಕಿರೋ ಸವಾಲುಗಳೇನು?

ಸ್ಟಾರ್ ಆಟಗಾರರ ದಂಡೇ ಇದೆ. ಅರ್ಧ ಟೀಮ್ ಇಂಡಿಯಾ ಆಟಗಾರರೇ ತುಂಬಿದ್ದಾರೆ. ಆದರೂ ಕೂಡಾ ಮುಂಬೈ ಇಂಡಿಯನ್ಸ್ ಐಪಿಎಲ್‌ನ ಈ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಮುಂಬೈ, ಈ ಸೀಸನ್‌ನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಜಯ ದಾಖಲಿಸಿದೆ. ಇಷ್ಟಾದರೂ ಮುಂಬೈ ಮ್ಯಾನೇಜ್‌ಮೆಂಟ್ ಮಾತ್ರ ಹಾರ್ದಿಕ್ ಪಾಂಡ್ಯ ಅವರ ಮೇಲೆ ನಂಬಿಕೆಯಿಟ್ಟಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಕಳಪೆ ಪ್ರದರ್ಶನ ನೀಡುತ್ತಿದ್ದರೂ, ಅವರನ್ನು ಬದಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅಲ್ಲದೆ ಪಾಂಡ್ಯ ಅವರನ್ನೇ ನಾಯಕನಾಗಿ ಮುಂದುವರಿಸಲು ಎಂಐ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.

ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಪ್ರದರ್ಶನ ಮತ್ತು ನಾಯಕತ್ವದ ನಿರ್ಧಾರಗಳು ಟೀಕೆಗೆ ಗುರಿಯಾಗಿದ್ದರೂ, ಫ್ರಾಂಚೈಸಿಯು ಈ ಹಂತದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರ ಬೆನ್ನುನೋವಿನ ಸಮಸ್ಯೆಯ ನಡುವೆಯೂ ಅವರ ಮೇಲೆಯೇ ಭರವಸೆ ಇಡಲಾಗಿದೆ. ಆದರೆ, ಸ್ಟಾರ್ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ವಿಫಲರಾಗಿರುವ ಸೂರ್ಯಕುಮಾರ್ ಅವರಿಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್​ ಕಡೆಯಿಂದ ಎಚ್ಚರಿಕೆ ಸಿಕ್ಕಿದೆ. ಏಕೆಂದರೆ ಈ ಬಾರಿ ಪ್ರತಿ ಪಂದ್ಯದಲ್ಲೂ ಕಣಕ್ಕಿಳಿದಿರುವ ಅವರು ಕೇವಲ 19.50 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಪಾಂಡ್ಯ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರೂ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.

ಯುವ ಪ್ರತಿಭಾವಂತ ಎಡಗೈ ದಾಂಡಿಗ ತಿಲಕ್ ವರ್ಮಾ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ್ದರು. ಈ ಶತಕದ ಹೊರತಾಗಿಯೂ ಅವರು ಕಳೆದ 10 ಪಂದ್ಯಗಳಿಂದ ಕಲೆಹಾಕಿರುವ ಒಟ್ಟು ಸ್ಕೋರ್ ಕೇವಲ 204 ರನ್​ಗಳು. ಹೀಗಾಗಿಯೇ ತಿಲಕ್ ವರ್ಮಾ ಕೂಡ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್​ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿರುವ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾರ ಕಳಪೆ ಪ್ರದರ್ಶನವು ಮುಂಬೈ ಇಂಡಿಯನ್ಸ್ ಪಾಲಿಗೆ ಹೊರೆಯಾಗಿ ಮಾರ್ಪಟ್ಟಿದೆ. ಹೀಗಾಗಿಯೇ ಇದೀಗ ಇಬ್ಬರು ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Sulekha