ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  MI- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್

ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ –  MI- ಡೆಲ್ಲಿ ನಡುವೆ ಡಬ್ಲ್ಯುಪಿಎಲ್ ಫೈನಲ್

ಮಹಿಳಾ ಪ್ರೀಮಿಯರ್ ಲೀಗ್​ ಮೂರನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಗುಜರಾತ್ ಜೈಂಟ್ಸ್‌ ತಂಡವನ್ನು ಮಣಿಸಿ ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಫೈನಲ್​ಗೇರಿದೆ. ಮುಂಬೈ ಇಂಡಿಯನ್ಸ್ ಈಗ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:  ಐಪಿಎಲ್ ಗಾಗಿ ಪ್ರಾಕ್ಟೀಸ್ ಶುರು ಮಾಡಿದ ಆರ್ ಸಿಬಿ ಬಾಯ್ಸ್ – ಈ ಸಲ ಕಪ್ ನಮ್ದೇ

ಮುಂಬೈನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 4 ವಿಕೆಟ್‌ ನಷ್ಟಕ್ಕೆ 213 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.2 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್‌ ಆಯ್ತು.

ಹೇಲಿ ಮ್ಯಾಥ್ಯೂಸ್ ಆಲ್‌ರೌಂಡರ್‌ ಆಟದಿಂದಾಗಿ ಎಲಿಮಿನೆಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಡಬ್ಲ್ಯೂಪಿಎಲ್‌ ಫೈನಲ್‌ ಪ್ರವೇಶಿಸಿದೆ.

ಈ ಗೆಲುವಿನೊಂದಿಗೆ ಮುಂಬೈ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದಂತಾಯಿತು. 2023 ರಲ್ಲಿ ನಡೆದ ಮೊದಲ ಆವೃತ್ತಿ ಮುಂಬೈ ಡೆಲ್ಲಿಯನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಶನಿವಾರ ಫೈನಲ್‌ನಲ್ಲಿ ಅದೇ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

ಇನ್ನು ಗುಜರಾತ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. 43 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಹೇಲಿ ಮ್ಯಾಥ್ಯೂಸ್ 3 ವಿಕೆಟ್‌, ಅಮೆಲಿಯಾ ಕೆರ್ 2 ವಿಕೆಟ್‌ ಪಡೆದರು.

ಮುಂಬೈ ಪರ ಯಸ್ತಿಕಾ ಭಾಟಿಯಾ 15 ರನ್‌ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್-ಬ್ರಂಟ್ 71 ಎಸೆತಗಳಲ್ಲಿ 133 ರನ್‌ ಜೊತೆಯಾಟವಾಡಿದರು.

ಹೇಲಿ ಮ್ಯಾಥ್ಯೂಸ್ 77 ರನ್‌(50 ಎಸೆತ, 10 ಬೌಂಡರಿ, 3 ಸಿಕ್ಸರ್‌) ಹೊಡೆದರೆ ನ್ಯಾಟ್ ಸಿವರ್-ಬ್ರಂಟ್ 77 ರನ್‌( 41 ಎಸೆತ, 10 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 36 ರನ್‌( 12 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸಿಡಿಸಿದ ಪರಿಣಾಮ ಮುಂಬೈ ತಂಡ 200 ರನ್‌ಗಳ ಗಡಿಯನ್ನು ದಾಟಿತ್ತು.

Shwetha M