RR ವಿರುದ್ಧ ಗೆದ್ದು ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ- ಲೀಗ್​ನಿಂದ ಹೊರಬಿದ್ದ ರಾಜಸ್ಥಾನ್

RR ವಿರುದ್ಧ ಗೆದ್ದು ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ- ಲೀಗ್​ನಿಂದ ಹೊರಬಿದ್ದ ರಾಜಸ್ಥಾನ್

ಐಪಿಎಲ್‌ ಸೀಸನ್‌ 18 ರಲ್ಲಿ ಕೆಟ್ಟ ಆರಂಭ ಪಡೆದಿದ್ದ  ಮುಂಬೈ ತಂಡ ಇದೀಗ ಅಜೇಯ ಓಟವನ್ನು ಮುಂದುವರೆಸಿದೆ. ತನ್ನ 11 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ 100 ರನ್‌ಗಳ ಜಯ ಸಾಧಿಸಿದೆ.

ಇದನ್ನೂ ಓದಿ: ರಾಮಾಯಣಕ್ಕೆ ಬಂದ ಯಶ್ -‌ 1 ತಿಂಗಳು ʼರಾವಣʼನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಾಕಿ ಭಾಯ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ರೋಹಿತ್ ಮತ್ತು ರಿಕಲ್ಟನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಇದಲ್ಲದೆ ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ನೀಡಿದರು. ರಿಕಲ್ಟನ್ ಕೇವಲ 38 ಎಸೆತಗಳಲ್ಲಿ 61 ರನ್ ಗಳಿಸಿದರೆ, ರೋಹಿತ್ 36 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಇಬ್ಬರಲ್ಲದೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ತಲಾ 48 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 217 ರನ್​​ಗಳಿಗೆ ಕೊಂಡೊಯ್ದರು.

ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ನಂತೆಯೇ ಬ್ಯಾಟಿಂಗ್ ಪ್ರದರ್ಶನ ನೀಡುತ್ತೇವೆ ಎಂದು ರಾಜಸ್ಥಾನ್ ರಾಯಲ್ಸ್ ಆಶಿಸಿತ್ತು. ಆದರೆ ಬೋಲ್ಟ್ ಮತ್ತು ಬುಮ್ರಾ ಈ ಭರವಸೆಯನ್ನು ಹುಸಿಗೊಳಿಸಿದರು. ಮೊದಲಿಗೆ ದೀಪಕ್ ಚಹಾರ್, ವೈಭವ್ ಸೂರ್ಯವಂಶಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ಬೌಲ್ಟ್ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಅವರ ವಿಕೆಟ್ ಪಡೆದರು. ಆ ಬಳಿಕ ಬಂದ ಬುಮ್ರಾ ರಾಜಸ್ಥಾನ ನಾಯಕ ರಿಯಾನ್ ಪರಾಗ್‌ಗೆ ಪೆವಿಲಿಯನ್‌ಗೆ ಹೋಗುವ ದಾರಿ ತೋರಿಸಿದರು. ಮುಂದಿನ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಕೂಡ ಔಟಾದರು.

ಹೀಗಾಗಿ ಪವರ್ ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ಬಳಿಕವೂ ತಂಡದ ಪೆವಿಲಿಯನ್ ಪರೇಡ್ ಮುಂದುವರೆಯಿತು. ಶುಭಂ ದುಬೆ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ರಾಜಸ್ಥಾನದ ಕೊನೆಯ ಭರವಸೆಯನ್ನು ಕೊನೆಗೊಳಿಸಿದರು. ಉಳಿದ ಕೆಲಸವನ್ನು ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಪೂರ್ಣಗೊಳಿಸಿದರು. ಅವರು ಧ್ರುವ್ ಜುರೆಲ್ ಅವರನ್ನು 11 ರನ್‌ಗಳಿಗೆ ಔಟ್ ಮಾಡಿದರೆ, ಮಹೇಶ್ ತೀಕ್ಷಣ ಮತ್ತು ಕುಮಾರ್ ಕಾರ್ತಿಕೇಯ ಅವರ ವಿಕೆಟ್‌ಗಳನ್ನು ಸಹ ಪಡೆದರು. ಕೊನೆಯಲ್ಲಿ ಬೌಲ್ಟ್, ಆರ್ಚರ್ ಅವರನ್ನು ಔಟ್ ಮಾಡಿ ರಾಜಸ್ಥಾನದ ಇನ್ನಿಂಗ್ಸ್ ಅನ್ನು 117 ರನ್‌ಗಳಿಗೆ ಕೊನೆಗೊಳಿಸಿದರು. ಮುಂಬೈ ವಿರುದ್ಧದ ಈ ಸೋಲಿನ ನಂತರ ರಾಜಸ್ಥಾನ ತಂಡವು ಅಧಿಕೃತವಾಗಿ ಲೀಗ್​ ಹಂತದಲ್ಲೇ ಐಪಿಎಲ್ 2025 ರ ಪ್ರಯಾಣವನ್ನು ಅಂತ್ಯಗೊಳಿಸಿದರೆ, ಇತ್ತ ಮುಂಬೈ ತಂಡ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

Shwetha M