ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ MIಗೆ ಭರ್ಜರಿ ಜಯ – ಪ್ಲೇಆಫ್ಸ್‌ಗೇರಿದ ಮುಂಬೈ ಇಂಡಿಯನ್ಸ್!

ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಗೆದ್ದು ಬೀಗಿದೆ. ಈ ಮೂಲಕ ಮುಂಬೈ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಹೀನಾಯ ಸೋಲು ಕಂಡ ಡೆಲ್ಲಿ ಪ್ಲೇ-ಆಫ್‌ನಿಂದ ಹೊರಬೀಳಲಿದೆ.
ಇದನ್ನೂ ಓದಿ: 2,000 ಕೋಟಿ ವೆಚ್ಚ ದೇಶದಲ್ಲಿ 72,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ : ಹೆಚ್‌ಡಿ ಕುಮಾರಸ್ವಾಮಿ
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 181 ರನ್ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಡೆಲ್ಲಿ ಬ್ಯಾಟಿಂಗ್ ವೈಫಲ್ಯದಿಂದ 121 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಪಾಂಡ್ಯ ಪಡೆ 59 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಮುಂಬೈ ಪರ ಸೂರ್ಯಕುಮಾರ್ ಯಾದವ್ (ಔಟಾಗದೇ) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 43 ಬಾಲ್‌ಗೆ 73 ರನ್ ಚಚ್ಚಿ ತಂಡವು ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾದರು.
ರಿಯಾನ್ ರಿಕೆಲ್ಟನ್ 25, ವಿಲ್ ಜಾಕ್ಸ್ 21, ತಿಲಕ್ ವರ್ಮಾ 27, ನಮನ್ ಧೀರ್ (ಔಟಾಗದೇ) 24 ರನ್ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 5, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೇವಲ 3 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ದರು. ಕೊನೆಗೆ ಮುಂಬೈ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಡೆಲ್ಲಿ ಪರ ಮುಕೇಶ್ ಕುಮಾರ್ 2, ದಶ್‌ಮಂಥಾ ಚಮೀರಾ, ಮುಸ್ತಾಫಿಜುರ್ ರೆಹಮಾನ್, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಮುಂಬೈ ನೀಡಿದ 181 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭರವಸೆ ಆಟಗಾರರೇ ಕೈಕೊಟ್ಟರು. ಕೆ.ಎಲ್.ರಾಹುಲ್ 11, ಡುಪ್ಲೆಸಿಸ್ ಮತ್ತು ಅಬಿಶೆಕ್ ಪೊರೆಲ್ ತಲಾ ಕೇವಲ 6 ರನ್ ಗಳಿಸಿ ಆಘಾತ ನೀಡಿದರು.
ಸಮೀರ್ ರಿಜ್ವಿ (39), ವಿಪ್ರಾಜ್ ನಿಗಂ (20), ಆಶುತೋಷ್ ಶರ್ಮಾ (18) ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ಸಮಾಧಾನಕರ ಆಟ ಆಡುವಲ್ಲೂ ವಿಫಲರಾದರು. ಮುಂಬೈ ಪರ ಮಿಚೆಲ್ ಸ್ಯಾಂಟ್ನರ್ ಮತ್ತು ಜಸ್ಪ್ರಿತ್ ಬುಮ್ರಾ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಟ್ರೆಂಟ್ ಬೋಲ್ಟ್, ದೀಪಕ್ ಚಹಾರ್, ವಿಲ್ ಜಾಕ್ಸ್ ಮತ್ತು ಕರ್ನ್ ಶರ್ಮಾ ತಲಾ 1 ವಿಕೆಟ್ ಪಡೆದರು.