ಗುವಾಹಟಿಗೆ ಹೊರಟ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ! – ಪಾಸ್‌ಪೋರ್ಟ್‌ ಇಲ್ಲದೇ ಆಧಾರ್ ತೋರಿಸಿ ಬಾಂಗ್ಲಾದೇಶಕ್ಕೆ ಹೋದ್ರಾ ಕೈ ​ ನಾಯಕರು?

ಗುವಾಹಟಿಗೆ ಹೊರಟ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ! – ಪಾಸ್‌ಪೋರ್ಟ್‌ ಇಲ್ಲದೇ ಆಧಾರ್ ತೋರಿಸಿ ಬಾಂಗ್ಲಾದೇಶಕ್ಕೆ ಹೋದ್ರಾ ಕೈ ​ ನಾಯಕರು?

ಭಾರತದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪಾಸ್‌ಪೋರ್ಟ್ ಇಲ್ಲದೆ ಢಾಕಾ ತಲುಪಿರುವ ಘಟನೆ ನಡೆದಿದೆ. ಮುಂಬೈನಿಂದ ಗುವಾಹಟಿಗೆ ಹೋಗುವ ವಿಮಾನವು ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ.

ದಟ್ಟವಾದ ಮಂಜಿನಿಂದಾಗಿ ವಿಮಾನವನ್ನು ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.  ಇದು ಇಂಡಿಗೋ ವಿಮಾನವಾಗಿದ್ದು, ವಿಮಾನ ಸಂಖ್ಯೆ 6E 5319. ಎಂದು ಹೇಳಲಾಗುತ್ತಿದೆ. ಈಗ ಗುವಾಹಟಿಗೆ ಹೋಗುವ ಅನೇಕ ಪ್ರಯಾಣಿಕರು ಬಾಂಗ್ಲಾದೇಶದಲ್ಲಿ ಪಾಸ್‌ಪೋರ್ಟ್ ಇಲ್ಲದೆ ಗಂಟೆಗಟ್ಟಲೆ ವಿಮಾನದೊಳಗೆ ಕುಳಿತಿದ್ದಾರೆ. ಈ ಪ್ರಯಾಣಿಕರ ಪೈಕಿ ಜನವರಿ 14 ರಂದು ಪ್ರಾರಂಭವಾಗುತ್ತಿರುವ ಕಾಂಗ್ರೆಸ್​ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕಾಂಗ್ರೆಸ್​ ನಾಯಕರು ಕೂಡ ಈ ವಿಮಾನದಲ್ಲಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಸುಮಲತಾಗೆ ಮಂಡ್ಯದ ಬಿಜೆಪಿ ಟಿಕೆಟ್‌ ಡೌಟ್!‌ – ಬಿ.ವೈ. ವಿಜಯೇಂದ್ರ ಮಾತುಕತೆ ಸಾಧ್ಯತೆ

ಈ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಸೂರಜ್ ಸಿಂಗ್ ಠಾಕೂರ್ ಕೂಡ ಇದ್ದರು. ವಿಮಾನವು ಢಾಕಾದಲ್ಲಿ ಇಳಿದ ನಂತರ, ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದರು. ಇದರೊಂದಿಗೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಸೂರಜ್ ಸಿಂಗ್ ಠಾಕೂರ್ “ನಾವು ಮುಂಬೈನಿಂದ ಗುವಾಹಟಿಗೆ ಹೋಗಿದ್ದೆವು, ಆದರೆ ನಮ್ಮ ವಿಮಾನವು ಬಾಂಗ್ಲಾದೇಶದ ಢಾಕಾದಲ್ಲಿ ರಾತ್ರಿ 3 ಗಂಟೆಗೆ ಬಂದಿಳಿದಿದೆ ಮತ್ತು ಇನ್ನೂ ಟೇಕಾಫ್ ಆಗಿಲ್ಲ” ಎಂದು ಹೇಳಿದ್ದಾರೆ. ವಿಮಾನವು ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದು ಎಲ್ಲರೂ ಚಿಂತಿತರಾಗಿದ್ದಾರೆ. ಇಂಡಿಗೋ ಸಹಾಯದಿಂದ ನಾವು ಆಧಾ‌ರ್ ಕಾರ್ಡ್‌ನೊಂದಿಗೆ ಮತ್ತು ಪಾಸ್‌ಪೋರ್ಟ್ ಇಲ್ಲದೆ ಢಾಕಾ ತಲುಪಿದ್ದೇವೆ ಎಂದು ಸೂರಜ್ ಸಿಂಗ್ ಠಾಕೂ‌ರ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಸುತ್ತಲೂ ಮಂಜಿನಿಂದಾಗಿ ಮುಂಬೈನಿಂದ ಗುವಾಹಟಿಗೆ ವಿಮಾನವನ್ನು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ವಿಮಾನ 6E 5319 ಮುಂಬೈನಿಂದ ಗುವಾಹಟಿಗೆ ಹಾರುತ್ತಿತ್ತು, ಆದರೆ ದಟ್ಟವಾದ ಮಂಜಿನಿಂದಾಗಿ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಬದಲಾಗಿ ಅದು ಢಾಕಾದಲ್ಲಿ ಇಳಿಯಿತು. ಪಾಸ್‌ಪೋರ್ಟ್ ಇಲ್ಲದ ಕಾರಣ ಎಲ್ಲಾ ಪ್ರಯಾಣಿಕರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ” ಎಂದು ಹೇಳಲಾಗುತ್ತಿದೆ. ಢಾಕಾದಿಂದ ಗುವಾಹಟಿಗೆ ವಿಮಾನವನ್ನು ನಿರ್ವಹಿಸಲು ಪರ್ಯಾಯ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೋ ತಿಳಿಸಿದೆ.

Shwetha M