ನಿಫಾ ವೈರಸ್ ಭೀತಿ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಪತ್ತೆ!
ಮುಂಬೈ: ಒಂದು ಕಡೆ ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಹೆಚ್ಚಾಗಿದ್ದರೆ, ಇನ್ನೊಂದೆಡೆ ದೇಶದಲ್ಲಿ ಝಿಕಾ ವೈರಸ್ ಭೀತಿ ಎದುರಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ಮೂವರಿಗೆ ಝಿಕಾ ಸೊಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಮುಂಬೈನಿಂದ ಸುಮಾರು 500 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯಲ್ಲಿ ಮೂವರಲ್ಲಿ ಝಿಕಾ ಸೋಂಕು ಪತ್ತೆಯಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದು! – 7 ಗ್ರಾಮಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ!
ಜ್ವರ, ಮೈ – ಕೈ ನೋವು ಮತ್ತು ದದ್ದು ದೇಹದಲ್ಲಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮೂವರಿಗೆ ಝಿಕಾ ವೈರಸ್ ಇರುವುದು ದೃಢಪಟ್ಟಿದೆ. ಅವರ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಗೆ ಕಳುಹಿಸಲಾಗಿದೆ. ಮೂವರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಗುರುತಿಸಲಾದ ಝಿಕಾ ವೈರಸ್ ಸೋಂಕು ವರದಿಯಾಗಿತ್ತು. ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುವ ರೋಗವಾಗಿದೆ ಎಂದು ತಜ್ಞರು ಹೇಳಿದ್ದರು.