ಮುಂಬೈ ದಾಳಿಯ ಮಾಸ್ಟರ್​​ಮೈಂಡ್​ ರಾಣಾಗೆ ಭಾರಿ ಭದ್ರತೆ – ಕೋಟೆಯಾಗಿ ಬದಲಾದ NIA ಕಚೇರಿ

ಮುಂಬೈ ದಾಳಿಯ ಮಾಸ್ಟರ್​​ಮೈಂಡ್​ ರಾಣಾಗೆ ಭಾರಿ ಭದ್ರತೆ – ಕೋಟೆಯಾಗಿ ಬದಲಾದ NIA ಕಚೇರಿ

ಭಾರತಕ್ಕೆ ಬಂದಿಳಿದಿರುವ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾನನ್ನು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮೊನ್ನೆಯಷ್ಟೇ ಕೋರ್ಟ್​ಗೆ ಹಾಜರು ಪಡಿಸಲಾಗಿದ್ದು, ಜಡ್ಜ್ 18 ದಿನಗಳ ಕಾಲ ರಾಣಾನನ್ನು NIA ಕಸ್ಟಡಿಗೆ ನೀಡಿ ಆದೇಶಿಸಿತ್ತು. ಇದೀಗ ರಾಣಾನನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.

ಇದನ್ನೂ ಓದಿ: ಧೋನಿ ಬಳಗಕ್ಕೆ ಹೀನಾಯ ಸೋಲು – ಕೆಕೆಆರ್‌ಗೆ 8 ವಿಕೆಟ್‌ಗಳ ಸುಲಭ ಜಯ

ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ. ರಾಣಾ ಆಗಮನದ ನಂತರ ಎನ್‌ಐಎ ಪ್ರಧಾನ ಕಚೇರಿ ಕೋಟೆಯಾಗಿ ಬದಲಾಗಿದೆ. ಹೆಚ್ಚುವರಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದೆ.

ಪ್ರತಿ ಇಂಚಿನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು 12 ಎನ್‌ಐಎ ಅಧಿಕಾರಿಗಳಿಗೆ ಮಾತ್ರ ಈ ಕೊಠಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ನೆಲದ ಮೇಲೆ ಹಾಸಿಗೆ ಹಾಸಲಾಗಿದೆ. ಸೆಲ್‌ ಒಳಗಡೆಯೇ ಸ್ನಾನ ಗೃಹ ಮತ್ತು ಶೌಚಾಲಯವಿದೆ. ಊಟ, ಕುಡಿಯುವ ನೀರು, ವೈದ್ಯಕೀಯ ಸರಬರಾಜು ಎಲ್ಲವನ್ನೂ ಒಳಗಡೆಗೆ ತಲುಪಿಸಲಾಗುತ್ತದೆ.

ಮೂಲಗಳ ಪ್ರಕಾರ ಶುಕ್ರವಾರ ವಿಚಾರಣೆ ಆರಂಭವಾಗಿದ್ದು ಇಂದಿನಿಂದ ರಾಣಾನನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತದೆ. ಡ್ಯುಯಲ್ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಿರುವ ಕೊಠಡಿಯಲ್ಲೇ ವಿಚಾರಣೆ ನಡೆಯಲಿದೆ. ಎಂಟು ಕೇಂದ್ರ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕೋರಿವೆ ಎಂದು ವರದಿಯಾಗಿದೆ.

ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆ ತಂದ ನಂತರ ರಾಣಾನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ ಬಳಿಕ ರಾಣಾನನ್ನು ಈ ವಿಶೇಷ ಸೆಲ್‌ನಲ್ಲಿ ಬಂಧಿಸಿ ಇಡಲಾಗಿದೆ.

Shwetha M

Leave a Reply

Your email address will not be published. Required fields are marked *