ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷಗಳಿಂದ ಪೊಲೀಸರ ಹುಡುಕಾಟ!

ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷಗಳಿಂದ ಪೊಲೀಸರ ಹುಡುಕಾಟ!

ಮುಂಬೈ: ಕ್ರಿಮಿನಲ್ ಕೇಸ್ಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಾರೆ. ಆರೋಪಿಯ ಸುಳಿವು ಏನಾದರೂ ಸಿಗುತ್ತದೆಯಾ ಅಂತಾ ಆರೋಪಿ ಕುಟುಂಬಸ್ಥರು, ಸ್ನೇಹಿತರನ್ನು ವಿಚಾರಿಸುತ್ತಾರೆ. ಅಲ್ಲದೇ ಆರೋಪಿ ವಿರುದ್ಧ ಮುಂಚೆಯೂ ಯಾವುದಾದರೂ ಪ್ರಕರಣ ದಾಖಲಾಗಿವೆಯೇ ಅಂತಾ ಪರಿಶೀಲಿಸುತ್ತಾರೆ. ಆದರೆ ಮುಂಬೈನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಜೈಲಿನಲ್ಲೇ ಇದ್ದ ಆರೋಪಿಗಾಗಿ ಪೊಲೀಸರು ಬರೋಬ್ಬರಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ್ದಾರಂತೆ. ಈ ಹಿನ್ನೆಲೆ, ಇದು ಬಯಲಾಗದ ರಹಸ್ಯ ಎಂದು ನ್ಯಾಯಾಲಯ ಪರೋಕ್ಷವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಚಾಲಕರು – ಪೊಲೀಸ್ ಠಾಣೆಯಲ್ಲಿ 1,000 ಬಾರಿ ಬರೆಯುವ ಶಿಕ್ಷೆ!

ಮುಂಬೈ ಪೊಲೀಸ್ ವಲಯದಲ್ಲೊಂದು ಅಚ್ಚರಿ ನಡೆದಿದೆ. 1999 ರ ಕೊಲೆ ಪ್ರಕರಣದಲ್ಲಿ ಛೋಟಾ ಶಕೀಲ್ ಗ್ಯಾಂಗ್‌ನ ಶಾರ್ಪ್ ಶೂಟರ್ ಎಂದು ಹೇಳಲಾದ ಆರೋಪಿ ಸಿದ್ದಿಖೀಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ ಆರೋಪಿ 5 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಕೂಡ ಪೊಲೀಸರಿಗೆ ಗೊತ್ತೇ ಆಗಿಲ್ವಂತೆ! ಇದನ್ನು ಸ್ವತಃ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ನ್ಯಾಯಾಲಯದ ನ್ಯಾಯಾಧೀಶರೇ ಅಚ್ಚರಿಯಿಂದ ಪ್ರಶ್ನಿಸಿದ್ದಾರೆ.

ಹಾಗಾದರೆ ಜೈಲಿನಲ್ಲಿದ್ದ ಆತನನ್ನು ಪತ್ತೆ ಹಚ್ಚಲು ಪೊಲೀಸರು ಹೇಗೆ ವಿಫಲರಾದರು? ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಮತ್ತು ವಿಚಾರಣಾಧೀನ ಕೈದಿಯ ದಾಖಲೆಯನ್ನು ನಿರ್ವಹಿಸುತ್ತಿದ್ದರೂ, ಆತನನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಏಜೆನ್ಸಿಗೆ ತಿಳಿದಿರುವ ಕಾರಣಕ್ಕಾಗಿ ಇದು ಬಯಲಾಗದ ರಹಸ್ಯವಾಗಿದೆ. ಈ ಕೌತುಕವನ್ನು ಅವರೇ ವಿವರಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸಿದ್ದಿಖೀ 1999 ಜುಲೈನಲ್ಲಿ ವಾಹಿದ್ ಅಲಿ ಖಾನ್ ನನ್ನು ಗುಂಡಿಟ್ಟು ಹತ್ಯೆ ಮಾಡಿ ತಪ್ಪಿಸಿಕೊಂಡಿದ್ದ. 2019 ರಲ್ಲಿ ಸಾಕ್ಷ್ಯ ಸಮೇತ ಪೊಲೀಸರು ಆತನನ್ನು ಬಂಧಿಸಿ ಆರೋಪ ಪಟ್ಟಿ ಸಲ್ಲಿಸಿದರು. ಆದರೆ ಇನ್ನೊಂದು ಪ್ರಕರಣದಲ್ಲಿ ಸಿದ್ದಿಖೀ ಸಿಐಡಿಯಿಂದ ಬಂಧನಕ್ಕೊಳಗಾಗಿ 2014 ರಿಂದ 2019 ವರೆಗೆ ಜೈಲಿನಲ್ಲೇ ಇದ್ದ. ಪೊಲೀಸರ ಯಡವಟ್ಟನ್ನು ಪರಿಗಣಿಸಿ ಇದೀಗ ಸಿದ್ದಿಖೀಯನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.

suddiyaana