ಕ್ರಿಕೆಟ್ ದೇವರು ಸಚಿನ್ ಸಾಲಿಗೆ ಸೇರಿದ ಕ್ಯಾಪ್ಟನ್ ಕೂಲ್ – ಧೋನಿಯ ನಂಬರ್ 7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧಾರ
ಕ್ಯಾಪ್ಟನ್ ಕೂಲ್ ಅಂತಾನೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ಆಟಗಾರ. 42 ವರ್ಷದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೆ ಅವರ ಖದರ್ ಮಾತ್ರ ಚೂರು ಕಡಿಮೆಯಾಗಿಲ್ಲ. ಐಪಿಎಲ್ ನಲ್ಲಿ ಆಡುತ್ತಿರುವ ಧೋನಿಯವರ ಆಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅವರು ಧರಿಸುವ 7ನೇ ಸಂಖ್ಯೆಯ ಜರ್ಸಿ ಇದೀಗ ನಿವೃತ್ತಿಯಾಗುವ ಸಮಯ ಬಂದಿದೆ.
ಧೋನಿ ಅಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ವಿಶ್ವ ಕಂಡ ಅತ್ಯುತ್ತಮ ಕ್ಯಾಪ್ಟನ್ ಅಂದ್ರೆ ಅದು ನಮ್ಮ ಮಾಹಿಯೇ. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ T20 ವಿಶ್ವಕಪ್, ODI ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಮೂರು ಪ್ರಮುಖ ICC ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಧೋನಿ ತಮ್ಮ 39ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ 2020ರ ಆಗಸ್ಟ್ ತಿಂಗಳಿನಲ್ಲಿ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ರಾಂಚಿಯಲ್ಲಿ ನೆಲೆಸಿರುವ ಧೋನಿ ಐಪಿಎಲ್ ನಲ್ಲಿ ಆಟ ಮುಂದುವರಿಸಿದ್ದಾರೆ. ಇದೀಗ ಧೋನಿ ನಿವೃತ್ತಿ ಘೋಷಿಸಿದ 3 ವರ್ಷಗಳ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವರದಿಯ ಪ್ರಕಾರ, ಧೋನಿಯ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 3ನೇ ಪಂದ್ಯ – ಜೊಹಾನ್ಸ್‌ಬರ್ಗ್ ಪಿಚ್ ಹೇಗಿದೆ?
ಸದ್ಯ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಾತ್ರ ಆಡುತ್ತಾರೆ. ಇದೀಗ ಧೋನಿ ನಿವೃತ್ತಿಯಾದ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕ್ರಿಕೆಟ್ ಲೋಕದಲ್ಲಿ ಧೋನಿ ಜೊತೆಗೆ ಅವರ ಜೆರ್ಸಿ ಸಂಖ್ಯೆ 7 ಕೂಡ ಅಷ್ಟೇ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಅವರ ನಾಯಕತ್ವದಲ್ಲಿ, ತಂಡವು ಮತ್ತೊಮ್ಮೆ 2014 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿತು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 2011ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಇದೀಗ ಈ ಶ್ರೇಷ್ಠ ನಾಯಕನ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಟೀಮ್ ಇಂಡಿಯಾದಲ್ಲಿರುವಾಗ ಆಟಗಾರರು ನಂಬರ್-7 ಜರ್ಸಿಯನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಭಾರತದ ಮುಂದಿನ ಯಾವುದೇ ಆಟಗಾರರು ಮತ್ತು ಪ್ರಸ್ತುತ ಆಟಗಾರರು ಜೆರ್ಸಿ ನಂಬರ್-7 ಧರಿಸುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ ಎನ್ನಲಾಗಿದೆ.
ಧೋನಿ ಜೆರ್ಸಿ ಹಿಂದೆ ಏಳು ಸಂಖ್ಯೆಯ ಬಳಕೆಗೆ ವಿಭಿನ್ನ ಕಥೆಗಳನ್ನು ಲಗತ್ತಿಸಲಾಗಿದೆ. ಆದರೆ, ಸ್ವತಃ ಧೋನಿ ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಏಳನೇ ಸಂಖ್ಯೆಯ ಜೆರ್ಸಿಯನ್ನು ಬಳಸುವುದಕ್ಕೆ ಬೇರೆ ಯಾವುದೇ ಕಾರಣವಿಲ್ಲ, ಅದು ನನ್ನ ಜನ್ಮದಿನವಾಗಿದೆ. ಆದ್ದರಿಂದ ನಾನು ಜೆರ್ಸಿ ಸಂಖ್ಯೆ 7 ಅನ್ನು ಧರಿಸುತ್ತೇನೆ. ಯಾವ ಸಂಖ್ಯೆ ಉತ್ತಮ ಎಂದು ಚಿಂತಿಸುವ ಬದಲು ನನ್ನ ಜನ್ಮದಿನಾಂಕದ ಜೆರ್ಸಿಯನ್ನು ಧರಿಸಲು ಪ್ರಾರಂಭಿಸಿದೆ,” ಎಂದು ಧೋನಿ ಹೇಳಿದ್ದರು. ಬಿಸಿಸಿಐ ಆಟಗಾರರೊಬ್ಬರ ಜರ್ಸಿಯನ್ನು ನಿವೃತ್ತಿಗೊಳಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದು ನಡೆದಿದೆ. ಭಾರತದ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಜೆರ್ಸಿ ನಂಬರ್ 10 ಧರಿಸುತ್ತಿದ್ದರು. ಅವರ ಜರ್ಸಿಯನ್ನು ಕೂಡ ಬಿಸಿಸಿಐ ನಿವೃತ್ತಿಗೊಳಿಸಿದೆ. ಶಾರ್ದೂಲ್ ಠಾಕೂರ್ ಅವರು ತಮ್ಮ ವೃತ್ತಿಜೀವನದ ಆರಂಭದ ಕೆಲವು ಪಂದ್ಯಗಳಲ್ಲಿ 10 ನಂಬರ್ ಜೆರ್ಸಿಯನ್ನು ಧರಿಸಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಳಿಕ 10 ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸಲಾಯಿತು. ಪ್ರಸ್ತುತ ಭಾರತ ತಂಡದ ಆಟಗಾರರಿಗೆ ಒಟ್ಟು 60 ನಂಬರ್‌ಗಳನ್ನು ನೀಡಲಾಗಿದೆ ಎಂದು ಬಿಸಿಸಿಐ (BCCI) ಅಧಿಕಾರಿ ಖಚಿತಪಡಿಸಿದ್ದಾರೆ.