ಐಪಿಎಲ್ ನ ಎಲ್ಲಾ ಟೂರ್ನಿ ಆಡಿದ್ದು ನಾಲ್ವರು ಪ್ಲೇಯರ್ಸ್ – ಕೊಹ್ಲಿ ವಿಶೇಷ ದಾಖಲೆ

ಐಪಿಎಲ್ ನ ಎಲ್ಲಾ ಟೂರ್ನಿ ಆಡಿದ್ದು ನಾಲ್ವರು ಪ್ಲೇಯರ್ಸ್ – ಕೊಹ್ಲಿ ವಿಶೇಷ ದಾಖಲೆ

2008ರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್ ಈಗ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಆಗಿ ಹೊರಹೊಮ್ಮಿದೆ. ಸಾವಿರಾರು ಕೋಟಿ ರೂಪಾಯಿಗಳ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತಿದೆ. 10 ಟೀಮ್​ಗಳಲ್ಲಿ ದೇಶ, ವಿದೇಶಗಳ ಸೂಪರ್ ಸ್ಟಾರ್ ಪ್ಲೇಯರ್ಸ್ ಆಡಿದ್ದಾರೆ. ಮೊದಲ ಸೀಸನ್‌ನಿಂದ ಇಲ್ಲಿಯವರೆಗೆ ಈ ಲೀಗ್‌ನಲ್ಲಿ 4 ಆಟಗಾರರು ಮಾತ್ರ ಆಡುತ್ತಿದ್ದು, ಈವರ್ಷವೂ ಮೈದಾನಕ್ಕಿಳಿಯೋಕೆ ರೆಡಿಯಾಗಿದ್ದಾರೆ. ಅದ್ರಲ್ಲಿ ನಂಬರ್ 1 ಕಿಂಗ್ ವಿರಾಟ್ ಕೊಹ್ಲಿ. ನಂಬರ್ 2 ಮಹೇಂದ್ರ ಸಿಂಗ್ ಧೋನಿ, ನಂಬರ್ 3 ರೋಹಿತ್ ಶರ್ಮಾ ಮತ್ತು ನಂಬರ್ 4 ಮನೀಶ್ ಪಾಂಡೆ.

ಇದನ್ನೂ ಓದಿ : ₹869 ಕೋಟಿಗೆ ಸಿಕ್ಕಿದ್ದೇ ₹52 ಕೋಟಿ – ಪಾಕಿಸ್ತಾನಕ್ಕೆ ಶೇ.85% ನಷ್ಟ

ಐಪಿಎಲ್ ನ ಇತಿಹಾಸದಲ್ಲಿ ಇಂಥಾದ್ದೊಂದು ದಾಖಲೆ ಬರೆದಿರೋದು ಆರ್​ಸಿಬಿಯ ಹೀರೋ ಕಿಂಗ್ ವಿರಾಟ್ ಕೊಹ್ಲಿ ಮಾತ್ರವೇ. ಡೇ ಒನ್ ನಿಂದ ಐಪಿಎಲ್ ಆಡ್ತಿರೋ ಕೊಹ್ಲಿ ಒಂದೇ ಫ್ರಾಂಚೈಸಿಗಾಗಿ ಎಲ್ಲಾ ಸೀಸನ್​ಗಳನ್ನು ಆಡಿದ್ದಾರೆ. ಐಪಿಎಲ್‌ನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅಗ್ರಗಣ್ಯರು. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕರಾಗಿಯೂ ಮುನ್ನಡೆಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯ ಜೊತೆಗೆ ಹಲವಾರು ದಾಖಲೆಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ. ಐಪಿಎಲ್​ನಲ್ಲಿ ಇವ್ರನ್ನ ಮೈದಾನದಲ್ಲಿ ನೋಡೋದೇ ಎಷ್ಟೋ ಜನರ ಕನಸು. ವಿರಾಟ್ ಕೊಹ್ಲಿಯಂತೆಯೇ ಎಂಎಸ್ ಧೋನಿ ಕೂಡ ಐಪಿಎಲ್​ನಲ್ಲಿ ಕಳೆದ 17 ಆವೃತ್ತಿಗಳನ್ನು ಆಡಿದ್ದಾರೆ. ಇದರಲ್ಲಿ ಒಮ್ಮೆ ಮಾತ್ರ ತಂಡ ಬದಲಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ (2010, 2011, 2018, 2021 ಮತ್ತು 2023) ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಬಟ್ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಎಸ್​ಕೆ ಫ್ರಾಂಚೈಸಿಯನ್ನು 2ವರ್ಷ ನಿಷೇಧಿಸಿದ್ದರಿಂದ ಧೋನಿ ಆ ಟೈಮಲ್ಲಿ  ಪುಣೆ ಸೂಪರ್​ಜೈಂಟ್ಸ್ ತಂಡದ ಪರ ಆಡಿದ್ದರು.

ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಆರಂಭದಿಂದಲೂ ಐಪಿಎಲ್ ಅಖಾಡದಲ್ಲಿ ಅಬ್ಬರಿಸುತ್ತಲೇ ಇದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಈ ಲೀಗ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ರೋಹಿತ್ ನಾಯಕತ್ವದಲ್ಲಿ ಮುಂಬೈ ಐದು ಬಾರಿ (2013, 2015, 2017, 2019, ಮತ್ತು 2020) ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಹಾಗೇ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ ಆಡಿರುವ 257 ಪಂದ್ಯಗಳಲ್ಲಿ 280 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ‘ಯೂನಿವರ್ಸ್ ಬಾಸ್’ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಅಲಂಕರಿಸಿದ್ದಾರೆ. 142 ಪಂದ್ಯಗಳಲ್ಲಿ 357 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲೇ ಇದ್ದಾರೆ.

ಮನೀಶ್ ಪಾಂಡೆ ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದು, ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆಯೂ ಮನೀಶ್ ಹೆಸರಿನಲ್ಲಿದೆ. ಬಲಗೈ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಪಾಂಡೆ ಐಪಿಎಲ್‌ನ ಉದ್ಘಾಟನಾ ಋತುವಿನಿಂದಲೂ ಇದರ ಭಾಗವಾಗಿದ್ದಾರೆ. ಮೊದಲ ಋತುವಿನಲ್ಲಿ, ಪಾಂಡೆ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದರು. ಆನಂತ್ರ, ಅವರು ಐಪಿಎಲ್ 2009 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದರು. ಅವರ 17 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ, ಪಾಂಡೆ ಒಟ್ಟು ಏಳು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ 2025 ರಲ್ಲಿ, ಅವರು ಕೆಕೆಆರ್ ತಂಡದ ಭಾಗವಾಗಲಿದ್ದಾರೆ.

Shantha Kumari

Leave a Reply

Your email address will not be published. Required fields are marked *