ಕ್ರಿಸ್ ಗೇಲ್, ಎಬಿಡಿ ಹೊಡಿಬಡಿ ಆಟಕ್ಕೂ ಸೆಡ್ಡು ಹೊಡೆದ ಎಂ.ಎಸ್ ಧೋನಿ

ಕ್ರಿಸ್ ಗೇಲ್, ಎಬಿಡಿ ಹೊಡಿಬಡಿ ಆಟಕ್ಕೂ ಸೆಡ್ಡು ಹೊಡೆದ ಎಂ.ಎಸ್ ಧೋನಿ

ಧೋನಿ ಅಂದ್ರೆ ಫ್ಯಾನ್ಸ್ ಯಾಕೆ ಈಗ್ಲೂ ಹುಚ್ಚೆದ್ದು ಕುಣೀತಾರೆ ಅನ್ನೋದು ನಿನ್ನೆಯ ಮ್ಯಾಚ್ ನೋಡಿದವ್ರಿಗೆ ಗೊತ್ತಾಗಿರುತ್ತೆ. ಚೆನ್ನೈ ಬ್ಯಾಟ್ಸ್​​ಮನ್​ಗಳು ಬೇಗ ಬೇಗ ಔಟಾಗ್ಲಿ, ಒಂದ್ಸಲ ತಲೈವಾ ಕ್ರೀಸ್​ಗೆ ಬರಲಿ ಅಂತಾ ಬೇಡಿಕೊಳ್ಳೋದು ಕೂಡ ಇದಕ್ಕೇ.. ವಯಸ್ಸು ಅನ್ನೋದು ಜಸ್ಟ್ ನಂಬರ್ಸ್ ಅಷ್ಟೇ.. ಕ್ರೀಸ್​ಗೆ ಇಳಿದ್ರೆ ನಾನು ಈಗ್ಲೂ ಯಾವ ಯಂಗ್​ಸ್ಟರ್​ಗೂ ಕಮ್ಮಿ ಇಲ್ಲ ಎನ್ನುವಂತೆ ಅಬ್ಬರಿಸಿದ್ದು ಮಹೇಂದ್ರ ಸಿಂಗ್ ಧೋನಿ. ಲಕ್ನೋ ವಿರುದ್ಧ ತಲೈವಾ ಸುನಾಮಿಗೆ ಕ್ರಿಸ್ ಗೇಲ್, ಎಬಿಡಿ ದಾಖಲೆಗಳೂ ಧೂಳೀಪಟ ಆದ್ವು. 2024ರ ಆವೃತ್ತಿಯ ಐಪಿಎಲ್​ನಲ್ಲಿ ಮತ್ತೊಮ್ಮೆ ಹೊಡಿಬಡಿ ಆಟ ಪ್ರದರ್ಶಿಸಿದ ಸಿಎಸ್​ಕೆ ತಂಡದ ಮಾಜಿ ಕ್ಯಾಪ್ಟನ್ ತಮ್ಮ ಹೆಸರಿನಲ್ಲಿ ಹೊಸ ದಾಖಲೆ ಬರೆದುಕೊಂಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಧೋನಿ 311.11 ಸ್ಟ್ರೈಕ್ ರೇಟ್‌ನಲ್ಲಿ 28 ರನ್ ಗಳಿಸಿ ಎದುರಾಳಿ ತಂಡಕ್ಕೆ ಮರ್ಮಾಘಾತ ನೀಡಿದ್ರು. ಚೆನ್ನೈ 150 ದಾಟದ ಸ್ಥಿತಿಯಲ್ಲಿದ್ದ ತಂಡದ ಮೊತ್ತವನ್ನ 176 ಕ್ಕೆ ಜಂಪ್ ಮಾಡಿಸಿದ್ರು. ಆದ್ರೆ ಎಲ್​ಎಸ್​ಜಿ ವಿರುದ್ಧ ಚೆನ್ನೈ ಸೋತ್ರು ಕೂಡ ಧೋನಿಯವ್ರ ಧಮಾಕೇಧಾರ್ ಫರ್ಫಾಮೆನ್ಸ್ ಮತ್ತು ರೆಕಾರ್ಡ್ಸ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಿತ್ತು. ಲಕ್ನೋ ವಿರುದ್ಧ ಸೋತ್ರೂ ಧೋನಿ  ಮಾಡಿದ ಸಾಧನೆ ಎಂಥಾದ್ದು..? ಯಂಗ್ ಸ್ಟರ್ಸ್ ಕಲಿಯಬೇಕಿರೋ ಪಾಠ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಡಿಕೆ ಸುರೇಶ್ ಪರ ನಡೆಯಬೇಕಿದ್ದ ದರ್ಶನ್ ರೋಡ್ ಶೋ ಕ್ಯಾನ್ಸಲ್!‌ – ಕಾರಣವೇನು ಗೊತ್ತಾ?

ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಆರಂಭದಲ್ಲೇ ಬಿಗ್ ಶಾಕ್ ಕೊಟ್ಟಿತ್ತು. ಸಿಎಸ್​​ಕೆ ಆರಂಭಿಕ ಆಟಗಾರ ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಮೊಹ್ಸಿನ್ ಖಾನ್ ಸಿಎಸ್​ಕೆಗೆ ಮೊದಲ ಆಘಾತ ನೀಡಿದ್ರು. ಮೊಹ್ಸಿನ್ ತಮ್ಮ ಮೊದಲ ಎಸೆತದಲ್ಲಿಯೇ ರಚಿನ್ ಅವರನ್ನು ಬೌಲ್ಡ್ ಮಾಡಿದರು. ನಾಯಕ ರುತುರಾಜ್ ಕೂಡ ಕೇವಲ 17 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಅಜಿಂಕ್ಯ ರಹಾನೆ ಕೂಡ 36 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ತಂಡದ ಸ್ಟಾರ್ ಬ್ಯಾಟರ್ ಶಿವಂ ದುಬೆ ಕೂಡ ಕೇವಲ 3 ರನ್‌ಗಳಿಗೆ ಔಟಾದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಗಮಿಸಿದ್ದ ಸಮೀರ್ ರಿಜ್ವಿ ಕೂಡ ಒಂದೇ ರನ್‌‌ಗೆ ಔಟಾದ್ರು. ಒಂದ್ಕಡೆ ಬ್ಯಾಕ್ ಟು ಬ್ಯಾಕ್ ವಿಕೆಟ್​ಗಳು ಉರುಳುತ್ತಿದರೆ ಜಡ್ಡು ಮಾತ್ರ ಅಬ್ಬರದ ಬ್ಯಾಟಿಂಗ್ ಮೂಲಕ ಚೆನ್ನೈ  ತಂಡಕ್ಕೆ ಆಸರೆಯಾದ್ರು. 35 ಬಾಲ್‌‌ಗಳಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿದ್ರು. ಮೊಯಿನ್‌ ಅಲಿ ಔಟಾದ ಬಳಿಕ ಧೋನಿ ಸುಂಟರಗಾಳಿಯಂತೆ ಎಂಟ್ರಿಯಾಗಿದ್ರು. ಗ್ರೌಂಡ್​ನಲ್ಲಿ ಧೋನಿ ಧೋನಿ ಘೋಷಣೆಯ ನಡುವೆ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ರು. 160 ರನ್​ಗಳ ಟಾರ್ಗೆಟ್ ನಿರೀಕ್ಷೆಯಲ್ಲಿದ್ದ ಲಕ್ನೋ ಬೌಲರ್​ಗಳನ್ನ ಅಕ್ಷರಶಃ ಬೆಂಡೆತ್ತಿದ್ದರು. 13 ಎಸೆತಗಳು ಬಾಕಿ ಇದ್ದಾಗ ಕ್ರೀಸ್‌ಗೆ ಬಂದಿದ್ದ ಎಂಎಸ್‌ ಧೋನಿ ಅಕ್ಷರಶಃ ಸಿಡಿಲಿನಂತೆ ಅಬ್ಬರಿಸಿದ್ರು. ಎದುರಿಸಿದ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 29 ರನ್‌ ಸಿಡಿಸಿದ್ದರು. ಆ ಮೂಲಕ ಸಿಎಸ್‌ಕೆ 176 ರನ್‌ ಕಲೆ ಹಾಕಲು ಸಾಧ್ಯವಾಯ್ತು.

ಈ ಗುರಿ ಬೆನ್ನಟ್ಟಿದ ಲಖನೌ ತಂಡ ಆರಂಭದಿಂದಲೂ ತನ್ನ ಪ್ರಾಬಲ್ಯ ಕಾಯ್ದುಕೊಂಡಿತ್ತು. ಲಖನೌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಚೆನ್ನೈ ಬೌಲರ್​ಗಳ ಬೆವರಿಳಿಸಿದ್ರು. ಡಿ ಕಾಕ್ 43 ಎಸೆತಗಳಲ್ಲಿ 54 ರನ್ ಸಿಡಿಸಿದ್ರೆ ರಾಹುಲ್ 53 ಎಸೆತಗಳಲ್ಲಿ 82 ರನ್ ಗಳಿಸಿ 8 ವಿಕೆಟ್‌ಗಳಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 15ನೇ ಓವರ್​ನ ಕೊನೆಯ ಎಸೆತದಲ್ಲಿ ಡಿ ಕಾಕ್ ಔಟಾಗಿದ್ದು, ಈ ವೇಳೆ ತಂಡದ ಸ್ಕೋರ್ 134 ರನ್ ಆಗಿತ್ತು. ಲಕ್ನೋ ಸೂಪರ್ ಜೈಂಟ್ಸ್‌ಗೆ ಕೊನೆಯ 30 ಎಸೆತಗಳಲ್ಲಿ ಇನ್ನೂ 43 ರನ್‌ಗಳ ಅಗತ್ಯವಿತ್ತು. ಕೊನೆಗೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 8 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದ್ರು. ಚೆನ್ನೈ ಪರ ಮುಸ್ತಾಫಿಜುರ್ ರೆಹಮಾನ್ ಮತ್ತು ಮತಿಶಾ ಪತಿರಾನ ಮಾತ್ರ ತಲಾ 1 ವಿಕೆಟ್ ಪಡೆದರು. ಮ್ಯಾಚ್ ವಿನ್ನಿಂಗ್ ಬಳಿಕ ಮಾತನಾಡಿದ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್, ಧೋನಿಯ ಗುಣಗಾನ ಮಾಡಿದ್ದಾರೆ. ಸಿಎಸ್‌ಕೆ ತಂಡವನ್ನು 160 ರನ್‌ಗಳಿಗೆ ನಿಯಂತ್ರಿಸಲು ಬಯಸಿದ್ದೆವು. ಆದರೆ, ಎಂಎಸ್‌ ಧೋನಿ ಬಂದು ನಮ್ಮ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಅಲ್ಲದೆ, ಸ್ಟೇಡಿಯಂನಲ್ಲಿನ ಎಂಎಸ್‌ ಧೋನಿ ಹೆಸರಿನ ಶಬ್ದಕ್ಕೆ ನಮ್ಮ ಯುವ ಬೌಲರ್‌ಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಲಕ್ನೋ ವಿರುದ್ಧ ಚೆನ್ನೈ ತಂಡ ಸೋತಿರಬಹುದು. ಆದ್ರೆ ಧೋನಿ ಆಡಿದ ರೀತಿಯನ್ನ ನಾವಿಲ್ಲಿ ಹೇಳಲೇಬೇಕು. ಲಾಸ್ಟ್ ಮೂಮೆಂಟ್​ನಲ್ಲಿ ಬಂದ್ರೂ ಧೋನಿ ಹೇಗೆ ಮ್ಯಾಚ್ ಟರ್ನ್ ಮಾಡ್ತಾರೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಎಂಎಸ್‌ ಧೋನಿ ಅವರು ಐಪಿಎಲ್‌ ಟೂರ್ನಿಯ 20ನೇ ಓವರ್‌ನಲ್ಲಿ ಈವರೆಗೂ 65 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2024ರ ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟ್‌ ಮಾಡಿದ 5 ಇನಿಂಗ್ಸ್‌ಗಳಲ್ಲಿ 255.88ರ ಸ್ಟ್ರೈಕ್‌ ರೇಟ್‌ನಲ್ಲಿ 87 ರನ್‌ಗಳನ್ನು ಸಿಡಿಸಿದ್ದಾರೆ. ಇದರ ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಕೀಪರ್‌ ಆಗಿ 5,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 9 ಎಸೆತಗಳಲ್ಲೇ ಅಜೇಯ 28 ರನ್ ಸಿಡಿಸಿ ದಿಗ್ಗಜರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 257 ಪಂದ್ಯಗಳಿಂದ 24 ಅರ್ಧಶತಕ ನೆರವಿನಿಂದ 5,169 ರನ್ ಗಳಿಸಿದ ಎಂಎಸ್ ಧೋನಿ, 356 ಬೌಂಡರಿ ಹಾಗೂ 247 ಸಿಕ್ಸರ್ ಸಿಡಿಸಿದ್ದಲ್ಲದೆ ಮಿಸ್ಟರ್ 360 ಬ್ಯಾಟರ್ ಎಬಿಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ಧೋನಿ ಐಪಿಎಲ್‌ನಲ್ಲಿ ವಿಕೆಟ್‌ಕೀಪರ್ ಆಗಿ 5000 ರನ್ ಪೂರೈಸಿದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡರು. ಶ್ರೀಮಂತ ಕ್ರಿಕೆಟ್​ ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್‌ಕೀಪರ್ ಬ್ಯಾಟರ್ ಎನಿಸಿಕೊಂಡರು. 2ನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ 4369 ರನ್​ಗಳಿಸಿದ್ದಾರೆ.ಹಾಗೇ ಚುಟುಕು ಸ್ವರೂಪದ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಪೈಪೋಟಿ ನೀಡುವಂತೆ ಬ್ಯಾಟ್ ಬೀಸುತ್ತಿರುವ ಮಹೇಂದ್ರ ಸಿಂಗ್ ಧೋನಿ, 40 ವರ್ಷದ ನಂತರ 500 ರನ್ ಪೂರೈಸಿದ ಮೊದಲ ಆಟಗಾರರಾಗಿ ಗುರುತಿಸಿಕೊಂಡು ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.  ಒಟ್ನಲ್ಲಿ ಬ್ಯಾಟಿಂಗ್ ಜತೆಗೆ ಬೌಲಿಂಗ್​​ನಲ್ಲೂ ಮಿಂಚಿದ ಲಕ್ನೋ, ಸಿಎಸ್​ಕೆ ತಂಡದ ವಿರುದ್ಧ ಸವಾರಿ ನಡೆಸಿತು. ಸತತ ಎರಡು ಸೋಲುಗಳ ನಂತರ ಲಕ್ನೋ ಜಯದ ಟ್ರ್ಯಾಕ್​ಗೆ ಮರಳಿದ್ದು, ಟೂರ್ನಿಯಲ್ಲಿ 4ನೇ ಗೆಲುವಿಗೆ ಮುತ್ತಿಕ್ಕಿದೆ.

Shwetha M