MRPLನಲ್ಲಿ ಸ್ಫೋಟ… ನಡುಗಿದ ಮನೆಗಳು.. ಉದುರಿ ಬಿದ್ದ ಕಿಟಕಿಗಳು!

ಮಂಗಳೂರಿನಲ್ಲಿ ಇಂದು ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿ ಜನರು ಆತಂಕಕ್ಕೀಡಾಗಿದ್ದಾರೆ. ಜೋಕಟ್ಟೆ ಸಮೀಪದ ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಅಂದರೆ MRPL ಘಟಕದ ಆವರಣದಲ್ಲಿ ಸ್ಫೋಟದಂತಹ ಭಾರಿ ಶಬ್ದ ಕೇಳಿಬಂದಿದ್ದು, ಬಳಿಕ ದಟ್ಟ ಹೊಗೆ ಆವರಿಸಿರುವುದು ವರದಿಯಾಗಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುತ್ತಮುತ್ತಲಿನ ಪ್ರದೇಶಗಳಲ್ಲೂ ಅದರ ಕಂಪನದ ಅನುಭವವಾಗಿದೆ ಎನ್ನಲಾಗಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಹಲವು ಮನೆಗಳ ಬಾಗಿಲು, ಕಿಟಕಿಗಳು ಕಂಪಿಸಿದ ಅಥವಾ ಹಾನಿಗೊಳಗಾದ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ.
ಇದನ್ನೂಓದಿ: ಮೈಸೂರಿನಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ – ಪೆಟ್ರೋಲ್ ಸುರಿದುಕೊಂಡು ಯುವತಿಯನ್ನ ತಬ್ಬಿಕೊಂಡ ಪಾಪಿ!
ಘಟನೆಯ ಬೆನ್ನಲ್ಲೇ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಸದ್ಯದ ಪ್ರಮುಖ ಪ್ರಶ್ನೆಯಾಗಿದೆ. MRPL ಆವರಣದಲ್ಲಿ ಯಾವ ಘಟಕದಲ್ಲಿ ಘಟನೆ ಸಂಭವಿಸಿದೆ ಮತ್ತು ಬೆಂಕಿ ಅಥವಾ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಘಟನೆಯ ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಘಟನೆಯಿಂದ ಉಂಟಾಗಿರುವ ಒಟ್ಟು ಆಸ್ತಿ ಹಾನಿ, ಯಾವುದೇ ಸಾವು-ನೋವು ಅಥವಾ ಗಾಯಾಳುಗಳ ಸಂಖ್ಯೆಯ ಕುರಿತು ಅಧಿಕೃತ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯಾವುದೇ ದೃಢೀಕರಿಸದ ಮಾಹಿತಿಯನ್ನು ನಂಬದೆ, ಅಧಿಕಾರಿಗಳ ಅಧಿಕೃತ ಮಾಹಿತಿಗಾಗಿ ಕಾಯುವುದು ಮುಖ್ಯವಾಗಿದೆ.
ಮಂಗಳೂರಿನ MRPLನಲ್ಲಿ ನಡೆದಿರುವ ಈ ಘಟನೆಯ ಕುರಿತು ಮುಂದಿನ ಕೆಲ ಗಂಟೆಗಳಲ್ಲಿ ಇನ್ನಷ್ಟು ಸ್ಪಷ್ಟ ಮಾಹಿತಿ ಹೊರಬರುವ ಸಾಧ್ಯತೆಯಿದೆ.

ನೋಡಿರಿ

