ಮಲ್ಲಿಕಾರ್ಜುನ ಖರ್ಗೆಗೆ ಸಂಸದ ಉಮೇಶ್ ಜಾಧವ್ ಸವಾಲು – ಈ ಬಾರಿಯೂ ಸೋಲಿಸ್ತೀನಿ ಎಂದು ಶಪಥ

ಮಲ್ಲಿಕಾರ್ಜುನ ಖರ್ಗೆಗೆ ಸಂಸದ ಉಮೇಶ್ ಜಾಧವ್ ಸವಾಲು – ಈ ಬಾರಿಯೂ ಸೋಲಿಸ್ತೀನಿ ಎಂದು ಶಪಥ

ಕಾಂಗ್ರೆಸ್​ನ ನಿಷ್ಠಾವಂತ ನಾಯಕ, ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ಸದ್ಯ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ರೇಸ್​ನ ಮುಂಚೂಣಿಯಲ್ಲಿದ್ದಾರೆ. ಖರ್ಗೆ ನೇತೃತ್ವದಲ್ಲೇ ಇಂಡಿಯಾ ಮೈತ್ರಿಕೂಟ ಚುನಾವಣೆ ಎದುರಿಸಲು ಸಜ್ಜಾಗಿದೆ. ಹೀಗಿದ್ರೂ ಖರ್ಗೆಗೆ ಅದೊಂದು ಆತಂಕ ಕಾಡ್ತಿದೆ. ಮತ್ತೊಮ್ಮೆ ಗುರು ಶಿಷ್ಯರ ನಡುವೆಯೇ ಕಾಳಗ ನಡೆಯುವ ಸಾಧ್ಯತೆ ಇದೆ. ಯಾಕಂದ್ರೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವ್ರನ್ನ ಸೋಲಿಸಿದ್ದು ಅವ್ರದ್ದೇ ಶಿಷ್ಯ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಉಮೇಶ್ ಜಾಧವ್ ಕಲಬುರಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. ಸೋಲಿಲ್ಲದ ಸರದಾರನಾಗಿ ಮೆರದಿದ್ದ ಖರ್ಗೆಗೆ ಸೋಲಿನ ರುಚಿ ತೋರಿಸಿದ್ದು ಈಗ ಇತಿಹಾಸ. ಆದ್ರೀಗ ಅದೇ ಇತಿಹಾಸ ಮರುಕಳಿಸೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ಈ ಸಲವೂ ನಾನೇ ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮಲ್ಲಿಕಾರ್ಜುನ ಖರ್ಗೆ ಈ ಸಲ ಸ್ಪರ್ಧಿಸಿದ್ರೆ ನಾನೇ ಸೋಲಿಸ್ತೀನಿ ಅಂತಾ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ: ಒಂದು ಕಲ್ಲು.. ಎರಡು ಹಕ್ಕಿ! – ಮಂಡ್ಯ, ಹಾಸನ, ಕೋಲಾರ ಕ್ಷೇತ್ರ ನೀಡಲು ಒಪ್ಪಿಗೆ, ಇನ್ನೆರಡು ಕ್ಷೇತ್ರಕ್ಕೆ ಬೇಡಿಕೆ

ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಹಂಡ್ರೆಡ್ ಪರ್ಸೆಂಟ್ ನನಗೆ ಕೊಡೋದು. ಎದುರಾಳಿ ಯಾರೇ ಇರಲಿ ಈ ಸಣ್ಣ ವ್ಯಕ್ತಿಯೇ ಮತ್ತೊಮ್ಮೆ ಅವರನ್ನ ಸೋಲಿಸ್ತಾನೆ ಎಂದು ಖರ್ಗೆಗೆ ನೇರಾನೇರ ಸವಾಲು ಹಾಕಿದ್ದಾರೆ. ಯಾರೇ ತಿಪ್ಪರಲಾಗ ಹೊಡೆದರೂ ನನಗೆ ಟಿಕೆಟ್ ಕೈ ತಪ್ಪಿಸಲು ಸಾಧ್ಯವಿಲ್ಲ. ಕೆಲವರು ನನಗೆ ಆ ಕಡೆಯಿಂದ ಡಿಸ್ಟರ್ಬ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿಯೂ ನಾವೇ ಗೆಲ್ಲೋದು, ಲೋಕಸಭಾ ಚುನಾವಣೆ ದೇಶದ ಚುನಾವಣೆ ಅಂತ ಜನ ಭಾವಿಸಿದ್ದಾರೆ. ಇದು ದೇಶದ ಅಭಿವೃದ್ಧಿ, ದೇಶದ ಐಕ್ಯತೆ, ದೇಶದ ರಕ್ಷಣೆಯ ಚುನಾವಣೆ ಇದೆ. ವಿಧಾನ ಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆಯೇ ಬೇರೆ ಎಂದು ಗುಡುಗಿದ್ದಾರೆ.

ಆದ್ರೆ ಖರ್ಗೆ ಲೋಕಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಕನ್ಫರ್ಮ್ ಆಗಿಲ್ಲ. ತಮ್ಮ 6 ದಶಕಗಳ ರಾಜಕೀಯ ಜೀವನದಲ್ಲಿ ಒಮ್ಮೆಯೂ ಪಕ್ಷಾಂತರ ಮಾಡಿದವರಲ್ಲ. ಕಾಂಗ್ರೆಸ್ ಹಾಗೂ ನೆಹರು, ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದಾರೆ. ಹಿಗಾಗೇ ಹೈಕಮಾಂಡ್ ಆದೇಶದಂತೆ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ರು. ಆದ್ರೆ 2019ರಲ್ಲಿ ಶಿಷ್ಯನಿಂದಲೇ ಸೋಲಬೇಕಾಯ್ತು. ಅಷ್ಟಕ್ಕೂ ಗುರು ಶಿಷ್ಯರೇ ಆಗಿದ್ದ ಖರ್ಗೆ ಮತ್ತು ಜಾಧವ್ ನಡುವೆ ವೈಮನಸ್ಸು ಉಂಟಾಗಿದ್ದೇಗೆ ಅನ್ನೋದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.

ಗುರುವಿಗೆ ತಿರುಮಂತ್ರ!

2008ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಖರ್ಗೆ ಶಾಸಕರಾಗಿದ್ರು. ಆದ್ರೆ ಸಾಮಾನ್ಯ ಕ್ಷೇತ್ರವಾಗಿದ್ದ ಕಲಬುರಗಿ, 2009ರಲ್ಲಿ ಎಸ್​ಸಿ ಮೀಸಲು ಕ್ಷೇತ್ರವಾಗಿ ಬದಲಾವಣೆಯಾಗಿತ್ತು. ಹೈಕಮಾಂಡ್ ಆದೇಶದಂತೆ 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಖರ್ಗೆ ಗೆಲುವು ದಾಖಲಿಸಿದ್ರು. 2014 ರಲ್ಲಿ ಎರಡನೇ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ರು. ಆದ್ರೆ 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಖರ್ಗೆ ವಿರುದ್ಧ ರಣವ್ಯೂಹ ಹೆಣೆದಿದ್ದ ಬಿಜೆಪಿ, ಖರ್ಗೆ ಶಿಷ್ಯ ಉಮೇಶ್ ಜಾಧವ್​ರನ್ನೇ ಅಖಾಡಕ್ಕಿಳಿಸಿತ್ತು. 2018ರ ವಿಧಾನಸಭಾ ಚುನಾವಣೆಗೆ ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಗೆದ್ದಿದ್ದ ಜಾಧವ್, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲವೆಂದು ಅಸಮಾಧಾನಗೊಂಡಿದ್ರು. ಮಲ್ಲಿಕಾರ್ಜುನ ಖರ್ಗೆ & ಪುತ್ರ ಪ್ರಿಯಾಂಕ್ ಖರ್ಗೆಯಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಅಂತಾ ಆರೋಪಿಸಿದ್ರು. ಬಂಡಾಯವೆದ್ದಿದ್ದ ಉಮೇಶ್ ಜಾಧವ್ ಗೆ ಭಾರತೀಯ ಜನತಾ ಪಾರ್ಟಿಯಿಂದ ಬಿಗ್ ಆಫರ್ ಬಂದಿತ್ತು. ಚಿಂಚೋಳಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ ಪುತ್ರ ಅವಿನಾಶ್ ಜಾಧವ್ ಗೆ ಟಿಕೆಟ್ ಭರವಸೆ ಬಿಜೆಪಿಯಿಂದ ಬಂದಿತ್ತು.  ಕೂಡಲೇ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾದ ಜಾಧವ್, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ರಾಜಕೀಯಕ್ಕೆ ಕರೆತಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಸ್ಪರ್ಧಿಸಿ ಗೆದ್ದಿದ್ರು.

ಗಾಡ್ ಫಾದರ್ ಇಲ್ಲದೆ, ಶ್ರೀಮಂತಿಕೆ ಇಲ್ಲದೆ, ಹೋರಾಟವನ್ನೇ ರಾಜಕೀಯ ಶಕ್ತಿಯನ್ನಾಗಿಸಿಕೊಂಡು ಬೆಳೆದಿದ್ದ ಖರ್ಗೆಯನ್ನ ಸೋಲಿಸಿದ್ದವರೇ ಇರಲಿಲ್ಲ. ಬರೋಬ್ಬರಿ 12 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ತಿ 11 ಸಲ ಗೆಲುವು ಸಾಧಿಸಿದ್ದರು. ಆದರೆ ಶಿಷ್ಯನ ಎದುರೇ ಒಮ್ಮೆ ಸೋಲಿನ ರುಚಿ ಕಾಣಬೇಕಾಯ್ತು. ಒಂದು ಕಾಲದಲ್ಲಿ ಖರ್ಗೆ ಅವರ ಪೋಲ್‌ ಏಜೆಂಟ್‌ ಆಗಿದ್ದ ಉಮೇಶ್‌ ಜಾಧವ್‌ ವಿರುದ್ಧ ಸೋತಿದ್ದರು. ಬಳಿಕ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದರು. ಇದೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಬಂದಿದೆ. ಖರ್ಗೆಗೆ ಚುನಾವಣಾ ಅಖಾಡಕ್ಕೆ ಇಳಿಯುತ್ತಾರಾ..? ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ..? ವಿಪಕ್ಷಗಳ ಮೈತ್ರಿಕೂಟಕ್ಕೆ ಸೋಲಾದ್ರೆ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುತ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Sulekha