ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ – ದೆಹಲಿ ಸಿಎಂ ಆಪ್ತ ಬಿಭವ್ ಕುಮಾರ್ ಅರೆಸ್ಟ್!

ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅರೆಸ್ಟ್ ಆಗಿದ್ದಾರೆ. ಶನಿವಾರ ದೆಹಲಿ ಪೊಲೀಸರು ಬಿಭವ್ ಕುಮಾರ್ ಅವರನ್ನು ಅರೆಸ್ಟ್ ಮಾಡಿ ಮುಖ್ಯಮಂತ್ರಿ ನಿವಾಸದ ಹಿಂದಿನ ಗೇಟ್‌ನಿಂದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ – ಹೆಚ್‌ಡಿ ದೇವೇಗೌಡ
ಮೇ 13 ರಂದು ಸಿಎಂ ನಿವಾಸದಲ್ಲಿ ತನ್ನ ಮೇಲೆ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿ, ದೂರು ನೀಡಿದ್ದರು. ಸ್ವಾತಿ ಮಲಿವಾಲ್ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತ್ತು. ತನಿಖೆಯ ಭಾಗವಾಗಿ ವಿಡಿಯೋ ಸೆರೆ ಹಿಡಿದ ನಂತರ ಶನಿವಾರ ನಸುಕಿನ ಜಾವ 2:15ಕ್ಕೆ ತಂಡ ಸಿಎಂ ನಿವಾಸದಿಂದ ಹೊರಬಂದಿತ್ತು. ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಸಿಸಿಟಿವಿ ಪೊಲೀಸರು ಸೀಲ್ ಮಾಡಿದ್ದಾರೆ. ತನಿಖೆಯ ದೃಷ್ಟಿಯಿಂದ ತಾಂತ್ರಿಕ ಸಾಕ್ಷಿಯಾಗಿ ಪರಿಗಣನೆ ಮಾಡಲು ಡಿವಿಆರ್ ಸಹಿತ ದತ್ತಾಂಶವನ್ನು ದೆಹಲಿ ಪೊಲೀಸರು ಸೀಲ್ ಮಾಡಿದ್ದಾರೆ.
ಇದೀಗ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆದಿರುವುದು ಖಚಿತಪಟ್ಟಿದೆ ಎಂದು ವೈದ್ಯಕೀಯ ವರದಿ ಹೇಳಿದೆ. ಸ್ವಾತಿ ಎಡಗಾಲಿಗೆ ಮತ್ತು ಬಲಕೆನ್ನೆಗೆ ಬಲವಾದ ಪೆಟ್ಟು ಬಿದ್ದಿದೆ ಎಂಬ ವಿಚಾರ ವೈದ್ಯಕೀಯ ವರದಿಯಲ್ಲಿ ಉಲ್ಲೇಖವಾಗಿದೆ. ಸ್ವಾತಿ ಅವರ ಹೇಳಿಕೆ ಆಧಾರದ ಮೇಲೆ ಹಾಗೂ ವೈದ್ಯಕೀಯ ವರದಿ ಆಧರಿಸಿ ಅರವಿಂದ್ ಆಪ್ತ ಕಾರ್ಯದರ್ಶಿ ವಿಭವ್ ಅವರನ್ನು ಬಂಧಿಸಲಾಗಿ ಎಂದು ವರದಿಯಾಗಿದೆ.