ಕಾಂಗ್ರೆಸ್ಸಿಗರ ವಿರುದ್ಧ ರೊಚ್ಚಿಗೆದ್ದ ಸಂಸದೆ ಸುಮಲತಾ – ಮಂಡ್ಯದಲ್ಲಿ ಶುರುವಾಯ್ತು ಕ್ರೆಡಿಟ್ ವಾರ್
ಮಂಡ್ಯ ಲೋಕಸಭಾ ಕಣ ದಿನದಿನಕ್ಕೂ ರಂಗು ಪಡೆದುಕೊಳ್ತಿದೆ. ನಾಯಕರ ಜಟಾಪಟಿ, ಟಿಕೆಟ್ ಗೊಂದಲದ ನಡುವೆ ಕ್ಷೇತ್ರದ ದಿಕ್ಕೇ ಬದಲಾಗುತ್ತಿದೆ. ಕಳೆದ ಬಾರಿ ಸ್ವಾಭಿಮಾನದ ಕಹಳೆ ಮೊಳಗಿಸಿ ಗೆದ್ದಿದ್ದ ಸುಮಲತಾ ಅಂಬರೀಶ್ ಈ ಬಾರಿಯೂ ಕ್ಷೇತ್ರವನ್ನ ವಶಪಡಿಸಿಕೊಳ್ಳೋ ತವಕದಲ್ಲಿದ್ದಾರೆ. ಆದ್ರೆ ಸುಮಲತಾಗೆ ಆರಂಭದಲ್ಲೇ ಆಘಾತ ಎದುರಾಗಿದ್ದು, ಬಿಜೆಪಿ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಆದ್ರೂ ಸುಮಲತಾ ಮಾತ್ರ ನನಗೇ ಟಿಕೆಟ್ ಅನ್ನೋ ಕಾನ್ಫಿಡೆಂಟ್ನಲ್ಲಿದ್ದಾರೆ. ಬುಧವಾರ ಕೂಡ 500% ಮಂಡ್ಯ ಟಿಕೆಟ್ ಸಿಕ್ಕೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಫುಲ್ ಌಕ್ಟಿವ್ ಆಗಿದ್ದು ಜಿಲ್ಲಾ ಪ್ರವಾಸ ಮಾಡ್ತಿದ್ದಾರೆ. ಬುಧವಾರ ಮಂಡ್ಯ, ಪಾಂಡವಪುರ, ಮದ್ದೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಓಡಾಟ ನಡೆಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಭೆ, ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮ್ಯಾರಥಾನ್ ಮೀಟಿಂಗ್ಗಳನ್ನ ಮಾಡುತ್ತಾ ಕ್ಷೇತ್ರದ ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ಜನರಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ಸುಮಲತಾ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಜಟಾಪಟಿ ಶುರುವಾಗಿದೆ. ಕ್ರೆಡಿಟ್ ವಾರ್ ಆರಂಭವಾಗಿದೆ.
ಇದನ್ನೂ ಓದಿ: ಯಶ್, ದರ್ಶನ್ ಇಬ್ರೂ ಪ್ರಚಾರಕ್ಕೆ ಬರಲ್ವಾ..? ಸುಮಲತಾಗೆ ಯಾರ ಬೆಂಬಲವೂ ಸಿಗ್ತಿಲ್ವಾ..?
ಹನಕೆರೆ ಫ್ಲೈ ಓವರ್ ಕ್ರೆಡಿಟ್ ತೆಗೆದುಕೊಳ್ಳಲು ಶಾಸಕ ರವಿಕುಮಾರ್ ಯತ್ನಿಸುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ. ಫ್ಲೈಓವರ್ ಹಂತಿಮ ಹಂತದಲ್ಲಿದ್ದು, ಮಂಡ್ಯ ಶಾಸಕರು ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಕಾಮಗಾರಿ ಆರಂಭ ಆಗೋ ಸಂದರ್ಭದಲ್ಲಿ ಶಾಸಕರು ಹೋರಾಟ ಮಾಡ್ತೀನಿ ಅಂತಿದ್ದಾರೆ. ರವಿಕುಮಾರ್ ಅವರು ಫಸ್ಟ್ ಟೈಮ್ ಶಾಸಕರಾಗಿದ್ದು, ಅವರಿಗೆ ತಿಳುವಳಿಕೆ ಕಡಿಮೆ ಇದೆ ಅನ್ನಿಸುತ್ತದೆ. ರವಿಕುಮಾರ್ ಶಾಸಕರಾಗಿ ಏಳೆಂಟು ತಿಂಗಳಾಗಿಲ್ಲ. ಕಷ್ಟಪಟ್ಟು ನಾವು ಕೆಲಸ ಮಾಡಿಸಿದ್ರೆ ಅಂತಿಮವಾಗಿ ಕ್ರೆಡಿಟ್ ತಗೋಳಕ್ಕೆ ಬರ್ತಾರೆ. ಹಸಿ ಹಸಿ ಸುಳ್ಳನ್ನ ಹೇಳೋದು ಯಾಕೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಹೆಚ್.ಎನ್ ರವೀಂದ್ರಗೂ ತಿರುಗೇಟು ಕೊಟ್ಟಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹೆಚ್.ಎನ್.ರವೀಂದ್ರ, ಕಾಂಗ್ರೆಸ್ ಹಾಗೂ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಗೆದ್ದರು, ನಟ ದರ್ಶನ್ ಕಾಲ್ ಮಾಡಿ ನಿಮ್ಮಿಂದ ಅಪ್ಪಾಜಿ ಗೌರವ ಉಳಿಯಿತು ಎಂದರು. ಸುಮಲತಾ ಕೂಡ ಕರೆ ಮಾಡಿ ಜನರೆಲ್ಲ ನಮ್ಮನ್ನು ಸ್ಟಾರ್ ಅಂತಾರೆ. ಇಂದು ಸ್ಟಾರ್ ಗಳೇ ನಿಮಗೆ ಅಭಿಮಾನಿಗಳಾಗಿದ್ದಾರೆ ಎಂದಿದ್ದರು. ನಾನು ಲಾಟರಿ ಹೊಡೆಯಿತು ಎಂದುಕೊಂಡೆ. ಆದರೆ ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ ಲೈನ್ ಅಲ್ಲ ಎಂದು ಹೇಳಿದ್ದರು. ರವೀಂದ್ರ ಹೇಳಿಕೆಗೆ ಖಾರವಾಗಿಯೇ ಉತ್ತರಿಸಿರುವ ಸುಮಲತಾ, ಎಲ್ಲವೂ ಲಿಮಿಟ್ ನಲ್ಲಿ ಇರಬೇಕು. ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆ ಮಾಡಿದ್ರು. ರಾಕ್ ಲೈನ್ ಗೆ ನಿರಂತರವಾಗಿ ಕರೆಮಾಡಿದ್ದೆಲ್ಲ ಗೊತ್ತಿದೆ. ಅವರ ಯೋಗ್ಯತೆ ಏನೆಂದು ಅರ್ಥಮಾಡಿಕೊಳ್ಳಬೇಕು ಎಂದು ರವೀಂದ್ರಗೆ ಸುಮಲತಾ ತಿರುಗೇಟು ನೀಡಿದ್ರು.
ಒಂದ್ಕಡೆ ಮಂಡ್ಯದ ತುಂಬೆಲ್ಲಾ ಓಡಾಡ್ತಿರೋ ಸುಮಲತಾ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸುತ್ತಿದ್ದಾರೆ. ಹಾಗೂ ಕಾಂಗ್ರೆಸ್ನಿಂದ ಸ್ಟಾರ್ ಚಂದ್ರುಗೆ ಟಿಕೆಟ್ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರೋ ಸುಮಲತಾ ದುಡ್ಡಿದೆ ಅನ್ನೋ ಕಾರಣಕ್ಕೆ ಚಂದ್ರುಗೆ ಟಿಕೆಟ್ ಕೊಡ್ತಿದ್ದಾರಾ..? ಸರ್ಕಾರಿ ಕಾರ್ಯಕ್ರಮದಲ್ಲಿ ಹೆಸರು ಘೋಷಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇಷ್ಟೆಲ್ಲಾ ಆದ್ರೂ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯನ್ನ ಮಾತ್ರ ಬಿಟ್ಟಿಲ್ಲ. ಹೋದಲ್ಲಿ ಬಂದಲ್ಲೆಲ್ಲಾ ಪ್ರಧಾನಿ ಮೋದಿಯವ್ರ ಗುಣಗಾನ ಮಾಡ್ತಿದ್ದಾರೆ. ಆದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಸಿಗುತ್ತಾ, ಸಿಕ್ಕರೂ ಜನಬಲ ಸಿಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.