ಜನರಿಂದ ದೂರ ಉಳಿದ ಸಂಸದೆ ಸುಮಲತಾ – ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..?

ಜನರಿಂದ ದೂರ ಉಳಿದ ಸಂಸದೆ ಸುಮಲತಾ –  ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..?

ಕರ್ನಾಟಕದಲ್ಲಿ ಮಂಡ್ಯ ರಾಜಕಾರಣದ ಆಳ ಅಗಲವನ್ನು ಅರ್ಥ ಮಾಡಿಕೊಳ್ಳೋದು ಅಷ್ಟು ಸುಲಭವಲ್ಲ.  ಹಲವು ದಶಕಗಳ ಕಾಲ ಕಾಂಗ್ರೆಸ್ ನೆಲೆಯಾಗಿದ್ದ ಮಂಡ್ಯವನ್ನ ಜೆಡಿಎಸ್ ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಜಟಾಪಟಿ ನಡುವೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ಲೋಕಸಭಾ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಕ್ಷೇತ್ರದ ದಿಕ್ಕನ್ನೇ ಬದಲಿಸಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಡುವೆಯೂ ಗೆದ್ದು ಬೀಗಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಮೊದಲಿನ ಹಾಗಿಲ್ಲ. ವಿಧಾನಸಭೆಯಲ್ಲಿ ಪ್ರಚಂಡ ಜಯ ಸಾಧಿಸಿರುವ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗಿವೆ. ಹಾಲಿ ಸಂಸದೆ ಸುಮಲತಾ ಅಂಬರೀಷ್ ಮತ್ತೆ ಕಣಕ್ಕೆ ಇಳಿಯುವುದಕ್ಕೆ ಹರಸಾಹಸ ಪಡ್ತಿದ್ದಾರೆ. ಸುಮಲತಾಗೆ ಈ ಸಲ ಸಾಲು ಸಾಲು ಸವಾಲುಗಳಿವೆ. ಪಕ್ಷಗಳ ಬೆಂಬಲವೂ ಇಲ್ಲ, ನಾಯಕರ ಸಪೋರ್ಟ್ ಸಿಗುತ್ತಿಲ್ಲ. ಅಷ್ಟೇ ಯಾಕೆ ಜನ ಕೂಡ ಸಂಸದೆಯಿಂದ ದೂರ ಸರಿದಿದ್ದಾರೆ. ಹಾಗಾದ್ರೆ ಸುಮಲತಾ ಒಂಟಿಯಾದ್ರಾ..? ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..? ಜೆಡಿಎಸ್ ಜೊತೆಗಿನ ಮೈತ್ರಿ ಬಳಿಕ ಬಿಜೆಪಿಯೂ ಅಂತರ ಕಾಯ್ದುಕೊಳ್ತಾ? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸುಮಲತಾ ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಕಷ್ಟನಾ..? – ಆಪ್ತರೇ ಕೈ ಕೊಟ್ಟ ಮೇಲೆ ಮುಂದೇನು?

ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಕ್ಷೇತ್ರ ಬಾರಿ ಕುತೂಹಲ ಮೂಡಿಸಿದೆ. ಆರಂಭದಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಜೆಡಿಎಸ್ ನಾಯಕರು ಕ್ಷೇತ್ರದಲ್ಲಿ ಅಲರ್ಟ್ ಆಗಿದ್ರು. ಇದರ ಬೆನ್ನಲ್ಲೆ ದೆಹಲಿಗೆ ದೌಡಾಯಿಸಿದ್ದ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೆಚ್‌. ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಜೆಡಿಎಸ್ ಮತ್ತು ಸುಮಲತಾ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೀತಿದೆ ಅನ್ನೋದು ಗೊತ್ತೇ ಇದೆ. ಆದ್ರೀಗ ಸುಮಲತಾ ದಿನೇ ದಿನೇ ಒಂಟಿಯಾಗ್ತಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಈ ಬಾರಿಯೂ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂದು ಪಣ ತೊಟ್ಟಿದ್ದಾರೆ. ಬಿಜೆಪಿಗೆ ಬೆಂಬಲ ಸೂಚಿಸಿರುವ ಸುಮಲತಾ ಕ್ಷೇತ್ರದ ಟಿಕೆಟ್ ಗಾಗಿ ಕಸರತ್ತು ನಡೆಸ್ತಿದ್ದಾರೆ. ಆದರೆ, ಕ್ಷೇತ್ರದ ಜನರಿಂದ ಅವರು ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಯಾವಾಗಲೂ ಬೆಂಗಳೂರಿನಲ್ಲಿಯೇ ಇರುವ ಅವರು ಕ್ಷೇತ್ರದ ಜನರಿಂದ ದೂರವಾಗಿದ್ದಾರೆ. ಹಾಗಾಗಿಯೇ ಅವರ ಕ್ಷೇತ್ರ ಉಳಿಸಿಕೊಳ್ಳುವ ಹಠಕ್ಕೆ ಯಾರು ಜೊತೆಯಾಗುತ್ತಿಲ್ಲ ಎನ್ನಲಾಗಿದೆ. ದೆಹಲಿ – ಬಿಜೆಪಿ ಎಂದು ಓಡಾಡುವ ಸಂಸದೆ ಸುಮಲತಾ ತಮ್ಮದೇ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಸ್ವಾಭಿಮಾನದ ಹೆಸರಲ್ಲಿ ಕಳೆದ ಬಾರಿ ಚುನಾವಣೆ ಎದುರಿಸಿದ ಅವರು ಒಂದು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡಿಲ್ಲ. ಜೊತೆಗೆ ಸ್ಥಳೀಯರೊಂದಿಗೆ ಉತ್ತಮ ಒಡನಾಟವನ್ನು ಕೂಡ ಇಟ್ಟುಕೊಂಡಿಲ್ಲ. ಒಂದು ಸುದ್ದಿಗೋಷ್ಠಿ ಮಾಡುವಾಗ ಕೂಡ ಮಂಡ್ಯದ ಜನತೆ ಅವರೊಂದಿಗೆ ಇರುವುದಿಲ್ಲ. ಒಂಟಿಯಾಗಿಯೇ ನಡೆಸುತ್ತಾರೆ ಎಂಬುದು ಸ್ಥಳೀಯರ ಆರೋಪ.

ಕಳೆದ ಬಾರಿ ಚುನಾವಣೆಯಲ್ಲಿ ಮಂಡ್ಯದಲ್ಲೇ ಮನೆ ಮಾಡಿ ಇಲ್ಲಿಯೇ ಇರುತ್ತೇನೆ. ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಸುಮಲತಾ ಕ್ಷೇತ್ರದ ಜನರಿಗೆ ಭರವಸೆ ನೀಡಿತ್ತು. ಆದ್ರೆ ಗೆದ್ದ ಬಳಿಕ ಕ್ಷೇತ್ರದಲ್ಲಿ ಉಳಿದಿದ್ದು ಕಡಿಮೆಯೇ. ಬೆಂಗಳೂರಿನಲ್ಲಿಯೇ ಇರುತ್ತಿದ್ದ ಸಂಸದೆ ಅಪರೂಪಕ್ಕೊಮ್ಮೆ ಎನ್ನುವಂತೆ ಕ್ಷೇತ್ರಕ್ಕೆ ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ವಾಪಸ್ಸಾಗುತ್ತಾರೆ. ಕೊರೊನಾ ಸಂದರ್ಭದಲ್ಲಂತೂ ಸಂಸದೆಯೇ ನಾಪತ್ತೆಯಾಗಿದ್ದಾರೆ ಎಂದು ಮಂಡ್ಯದ ಜನ ಮಾತಾಡಿಕೊಳ್ತಿದ್ರು. ಹೀಗೆ ಸುಮಲತಾ ಆರಂಭದಿಂದಲೂ ಜನರ ಜೊತೆ ಉತ್ತಮ ಒಡನಾಟ ಹೊಂದುವಲ್ಲಿ ಫೇಲ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಅಂಬರೀಶ್ ಅಭಿಮಾನಿಗಳೂ ಸಹ ಸುಮಲತಾ ಬೆನ್ನಿಗೆ ನಿಲ್ಲುತ್ತಿಲ್ಲ.

ಮಂಡ್ಯದ ಗಂಡು ಅಂತಾನೇ ಕರೆಸಿಕೊಳ್ಳುವ ನಟ ಅಂಬರೀಶ್​ಗೆ ಮಂಡ್ಯದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದ್ರೆ ಅಂಬರೀಶ್ ನಿಧನದ ನಂತರ ಸುಮಲತಾ ಅವರ ಜೊತೆಗಿದ್ದ ಎಷ್ಟೋ ಅಭಿಮಾನಿಗಳು ಈಗ ಸಂಸದೆ ಜೊತೆಗಿಲ್ಲ. ಅಭಿಮಾನಿಗಳಿರಲಿ ಅಂಬರೀಶ್ ಅವರ ಜೊತೆಗೆ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರಲ್ಲಿ ಅನೇಕರು ಈಗ ಸುಮಲತಾ ಜೊತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಟ ದರ್ಶನ್, ಯಶ್, ರಾಕ್‌ಲೈನ್‌ ವೆಂಕಟೇಶ್ ಮಾತ್ರ ಆಗ್ಗಾಗ್ಗೆ ಅವರ ಜೊತೆಗೆ ಇರುತ್ತಾರೆ. ಈ ಬಾರಿಯ ಚುನಾವಣೆಗೆ ನಿಂತರೆ ಅವರು ಪ್ರಚಾರಕ್ಕೆ ಬರುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ನೆಲೆಸದ, ಬರೀ ಸಂದರ್ಶನಗಳನ್ನಷ್ಟೆ ಮಾಡಿ ಸುಮ್ಮನಾಗುತ್ತಿದ್ದ ಸುಮಲತಾ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಪಟ್ಟು ಹಿಡಿದು ಕೂರುವ ಅಭಿಮಾನಿ ಅಥವಾ ಕಾರ್ಯಕರ್ತರ ಬಳಗವಿಲ್ಲ. ಹೀಗಾಗಿ ಅವರು ಕೂಡ ಗಟ್ಟಿ ದನಿಯಲ್ಲಿ ಬಿಜೆಪಿ ಬಳಿ ಟಿಕೆಟ್ ಕೇಳುತ್ತಿಲ್ಲ.

2019ರ ಚುನಾವಣೆ ವೇಳೆ ಸುಮಲತಾ ಗೆಲುವಿಗೆ ಹಲವು ಕಾರಣಗಳಿದ್ದವು. ಅಂಬರೀಶ್ ನಿಧನದಿಂದಾಗಿ ಸುಮಲತಾ ಪರ ಜನ್ರಿಗೆ ಅನುಕಂಪ ಇತ್ತು. ಅಲ್ದೇ ಜೆಡಿಎಸ್ ನಾಯಕರು ನಾಲಗೆ ಹರಿಬಿಟ್ಟಿದ್ದು ಕೂಡ ಪ್ಲಸ್ ಪಾಯಿಂಟ್ ಆಗಿತ್ತು. ಆದ್ರೆ ಗೆದ್ದ ಬಳಿಕ ಸುಮಲತಾ ಮಾಡಿಕೊಂಡಿರುವ ಸ್ವಯಂಕೃತ ಅಪರಾಧಗಳೇ ಮುಳುವಾಗುತ್ತಿವೆ. ಜನರ ಜೊತೆ ಅಂತರ ಕಾಯ್ದುಕೊಂಡಿದ್ದು, ಕ್ಷೇತ್ರದಿಂದ ದೂರ ಉಳಿದಿದ್ದು, ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಬರೀ ಸುದ್ದಿಗೋಷ್ಠಿಗಳಿಗಷ್ಟೇ ಸೀಮಿತವಾಗಿದ್ದು, ಆಪ್ತರ ನಂಬಿಕೆ ಕಳೆದುಕೊಂಡಿದ್ದು ತಿರುಗು ಬಾಣವಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಿದ್ರೆ ಸುಮಲತಾ ಒಂಟಿಯಾಗಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಆದ್ರೆ ಇದೆಲ್ಲವನ್ನೂ ಮೆಟ್ಟಿ ಮಂಡ್ಯದಲ್ಲಿ ಮತ್ತೆ ಹೇಗೆ ಗೆಲ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

 

Sulekha