ಅಭಿವೃದ್ಧಿ ಮಂತ್ರ.. ಮೋದಿ ಜಪ.. ಜೆಡಿಎಸ್ ವಿರುದ್ಧ ವಾಗ್ಬಾಣ – ‘ಕೇಸರಿ’ ಪತಾಕೆ ಹಾರಿಸಿದ ಸುಮಲತಾ!

ಅಭಿವೃದ್ಧಿ ಮಂತ್ರ.. ಮೋದಿ ಜಪ.. ಜೆಡಿಎಸ್ ವಿರುದ್ಧ ವಾಗ್ಬಾಣ – ‘ಕೇಸರಿ’ ಪತಾಕೆ ಹಾರಿಸಿದ ಸುಮಲತಾ!

ಮಾತು ಮಾತಲ್ಲೂ ಅಂಬರೀಶ್​ರನ್ನ ಸ್ಮರಿಸುತ್ತಲೇ ಸಂಸದೆ ಸುಮಲತಾ ಇವತ್ತು ಮಂಡ್ಯ ರಣಕಣದಲ್ಲಿ ಘೀಳಿಟ್ಟಿದ್ದಾರೆ. ಭದ್ರಕೋಟೆ, ಭದ್ರಕೋಟೆ ಅಂತೀರಲ್ಲ ಜಿಲ್ಲೆಗೆ ನೀವೇನ್ ಮಾಡಿದ್ದೀರಾ ತೋರಿಸಿ ಅಂತಾ ದಾಖಲೆಗಳನ್ನ ಮುಂದಿಟ್ಟು ಜೆಡಿಎಸ್​ಗೆ ನೇರಾನೇರಾ ಸವಾಲೆಸೆದಿದ್ದಾರೆ.

2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನಲಾಗ್ತಿತ್ತು. ಹೀಗಾಗಿ ಇವತ್ತು ಸ್ವತಃ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ್ರು.. ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿಹೊಗಳಿದ ಸಂಸದೆ ಮಾತುಮಾತಲ್ಲೂ ದಳಪಡೆಯನ್ನ ಕುಟುಕಿದ್ರು. ಅದ್ರಲ್ಲೂ ಹೆಸರು ಪ್ರಸ್ತಾಪಿಸದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾನು ರಾಜಕಾರಣಕ್ಕೆ ಬಂದು ನಾಲ್ಕು ವರ್ಷ ಆಯ್ತು ಎಂದು ಹೇಳುತ್ತಲೇ 2018ರ ಚುನಾವಣೆಯನ್ನ ನೆನಪಿಸಿಕೊಂಡ್ರು.

ಇದನ್ನೂ ಓದಿ : 120 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ – ಫಸ್ಟ್ ಲಿಸ್ಟ್ ನಲ್ಲಿ ಯಾರಿಗೆಲ್ಲಾ ಅವಕಾಶ..?

ನಾನು ಅಂಬರೀಶ್ ಅವರ ಪತ್ನಿ, ಒಂದು ಹೆಣ್ಣು ಅನ್ನೋದನ್ನೂ ಮರೆತು ನನ್ನ ಅವಮಾನ ಮಾಡಿದ್ರು. ಈಗ್ಲೂ ಕೂಡ ನನ್ನ ಬಗ್ಗೆ ಮಾತಾಡೋದು ನಿಂತಿಲ್ಲ. ಸಭೆ ಮಾಡೋಕೂ ಕೂಡ ಬಿಡಲ್ಲ ಅಂದ್ರು. ಹಾಗೇ ಕೊವಿಡ್ ಟೈಮಲ್ಲಿ ಸಂಸದರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಹೆಚ್​ಡಿಕೆಗೆ ತಿರುಗೇಟು ಕೊಟ್ರು. ನಾನು ಸಂಸದೆಯಾಗಿ 9 ತಿಂಗಳಲ್ಲೇ ಕೊರೊನಾ ಬಂದಿತ್ತು. ಅಷ್ಟ್ರಲ್ಲಿ ಇನ್ನೂ ಸಂಸದರ ನಿಧಿ ಇನ್ನೆಷ್ಟು ಬರುತ್ತೆ. ಆದ್ರೂ ನಾನು ಕೊವಿಡ್ ಫಂಡ್ ಕೊರತೆಯಿದ್ದಾಗ ಅದನ್ನ ತರಿಸುವಲ್ಲಿ ಯಶಸ್ವಿಯಾಗಿದ್ದೆ. ಹಾಗಂತ ನಾನೇನ್ ಮಾಡಿದ್ದೀನಿ ಅಂತಾ ಕಾರಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಹೇಳೋಕೆ ಆಗುತ್ತಾ ಅಂತಾ ಲೇವಡಿ ಮಾಡಿದ್ರು. ಅಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ 2 ಸಲ ಹಲ್ಲೆಗೆ ಯತ್ನಿಸಲಾಗಿತ್ತು ಎಂದು ಹೇಳಿದ್ರು. ಇದೇ ವೇಳೆ ನಾಲ್ಕು ವರ್ಷಗಳ ಅವಧಿಯಲ್ಲಿ ಏನೆಲ್ಲಾ ಮಾಡಿದ್ದೀನಿ ಅನ್ನೋ ಬಗ್ಗೆ ದಾಖಲೆಗಳನ್ನ ತೋರಿಸಿದ್ರು.

ಮಂಡ್ಯದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಭಿವೃದ್ಧಿ ಆಗ್ತಿದೆ. ಆದ್ರೆ ಭದ್ರಕೋಟೆ, ಭದ್ರಕೋಟೆ ಅಂತಾ ಎದೆಬಡ್ಕೊಂಡು ಹೇಳೋ ನೀವು ಏನ್ ಮಾಡಿದ್ದೀರಾ ಅಂತಾ ಸವಾಲಾಕಿದ್ರು. ನಿಮಗೆ ರಾಜಕಾರಣ, ಚುನಾವಣೆ, ಕುಟುಂಬದ ಒಬ್ಬೊಬ್ಬರಿಗೆ ಒಂದೊಂದು ಅಧಿಕಾರ ಇದೆ. ಹಾಗಾದ್ರೆ ಜನ ಏನ್ ಮಾಡ್ಬೇಕು ಅಂತಾ ದೊಡ್ಡಗೌಡ್ರ ಫ್ಯಾಮಿಲಿ ಪಾಲಿಟಿಕ್ಸ್ ವಿರುದ್ಧ ಗುಡುಗಿದ್ರು. ಇದೇ ವೇಳೆ ಅಭಿಷೇಕ್ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ ಸುಮಲತಾ ‘ನಾವು ಕುಟುಂಬ ರಾಜಕಾರಣ ಮಾಡಲ್ಲ. ಚಾಮುಂಡಿ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ ಅಭಿಷೇಕ್ ಅಂಬರೀಶ್​ಗೆ ಟಿಕೆಟ್ ಕೊಡಿ ಎಂದು ನಾನು ಯಾರನ್ನೂ ಕೇಳಿಲ್ಲ. ನಾನು ರಾಜಕಾರಣದಲ್ಲಿ ಇರೋವರೆಗೂ ಅಭಿಷೇಕ್ ಅಂಬರೀಶ್ ರಾಜಕಾರಣಕ್ಕೆ ಬರಲ್ಲ. ಅಭಿಗೆ ಈಗಾಗ್ಲೇ 2 ಪಕ್ಷದಿಂದ ಆಫರ್ ಬಂದಿತ್ತು. ಆದರೆ ಅಭಿ ಒಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ರು.

ಇದೇ ವೇಳೆ ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ಸುಮಲತಾ, ನಾಲ್ಕು ವರ್ಷದಿಂದ ಒಬ್ಬಂಟಿಯಾಗಿ ಹೋರಾಟ ಮಾಡಿದ್ದೇನೆ. ಈಗ ಮಂಡ್ಯದಲ್ಲಿ ಬದಲಾವಣೆ ತರಲು ಅಭಿವೃದ್ಧಿ ಮಾಡಲು ಮತ್ತೊಂದು ಶಕ್ತಿಯ ಅವಶ್ಯಕತೆ ಇದೆ.. ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ.

suddiyaana