ಭಾರತ – ಮಯನ್ಮಾರ್ ನಡುವೆ ಮುಕ್ತ ಸಂಚಾರ ಬಂದ್‌! – ಕಾರಣವೇನು ಗೊತ್ತಾ?

ಭಾರತ – ಮಯನ್ಮಾರ್ ನಡುವೆ ಮುಕ್ತ ಸಂಚಾರ ಬಂದ್‌! – ಕಾರಣವೇನು ಗೊತ್ತಾ?

ದೇಶದ ಆಂತರಿಕ ಭದ್ರತೆ ಬಲಪಡಿಸುವ ಉದ್ದೇಶದಿಂದ ಭಾರತ – ಮಯನ್ಮಾರ್ ನಡುವಿನ ಮುಕ್ತ ಸಂಚಾರ ಆಡಳಿತ ವ್ಯವಸ್ಥೆಯನ್ನು (ಎಫ್‌ಎಂಆರ್‌) ರದ್ದುಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

‘ಆಕ್ಟ್‌ ಈಸ್ಟ್‌ ಪಾಲಿಸಿ’ಯ ಭಾಗವಾಗಿ 2018ರಲ್ಲಿ ಭಾರತ- ಮಯನ್ಮಾರ್ ನಡುವೆ ಮುಕ್ತ ಓಡಾಟ ವ್ಯವಸ್ಥೆ ಜಾರಿಗೆ ಬಂದಿತ್ತು. ಇದರ ಪ್ರಕಾರ, ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಉಭಯ ದೇಶಗಳ ವಾಸಿಗಳು 16 ಕಿ.ಮೀ.ವರೆಗೆ ಯಾವುದೇ ದಾಖಲೆ ಇಲ್ಲದೆ ಮುಕ್ತವಾಗಿ ಓಡಾಡಬಹುದಾಗಿತ್ತು.

ಇದನ್ನೂ ಓದಿ: ಅಕ್ರಮ ಮಸೀದಿ ತೆರವು ವೇಳೆ ಭಾರಿ ಹಿಂಸಾಚಾರ – ನಾಲ್ವರು ಸಾವು, 250 ಮಂದಿಗೆ ಗಾಯ

ಆದರೆ ಈ ವ್ಯವಸ್ಥೆಯ ಲಾಭ ಪಡೆದು ಮಯನ್ಮಾರ್ ನ ಬುಡಕಟ್ಟು ಉಗ್ರಗಾಮಿಗಳು ದೇಶದೊಳಕ್ಕೆ ಪ್ರವೇಶಿಸುತ್ತಿದ್ದಾರೆ. ಭಾರತಕ್ಕೆ ಮಾದಕವಸ್ತುಗಳನ್ನು ಸಾಗಿಸಲಾಗುತ್ತಿದೆ. ಅಲ್ಲದೆ ಅಕ್ರಮ ವಲಸಿಗರು ದೇಶದೊಳಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮಯನ್ಮಾರ್ ನ ಜುಂಟಾ ಆಳ್ವಿಕೆ ವಿರುದ್ಧ ಇರುವ ಬಂಡುಕೋರರು ಕೂಡ 2021ರ ತರುವಾಯ ಭಾರಿ ಪ್ರಮಾಣದಲ್ಲಿ ದೇಶಕ್ಕೆ ಆಗಮಿಸುತ್ತಿದ್ದಾರೆ ಎಂದು ಈಶಾನ್ಯ ರಾಜ್ಯಗಳು ಆರೋಪಿಸಿದ್ದವು. ಈ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಭಾರತ ಹಾಗೂ ಮಯನ್ಮಾರ್ ನಡುವೆ ಕಳೆದ ಆರು ವರ್ಷಗಳಿಂದ ಇರುವ ಮುಕ್ತ ಓಡಾಟ ವ್ಯವಸ್ಥೆಯನ್ನು ರದ್ದುಗೊಳಿಸುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ದೇಶದ ಆಂತರಿಕ ಭದ್ರತೆ ಹಾಗೂ ಜನಸಂಖ್ಯಾ ಸ್ವರೂಪವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಮಿತ್‌ ಶಾ ಅವರು ತಿಳಿಸಿದ್ದಾರೆ.

Shwetha M