ಅಳಿಯನಿಗೆ 379 ಬಗೆಯ ಭಕ್ಷ್ಯ ಭೋಜನ ಮುಂದಿಟ್ಟ ಅತ್ತೆ – ಇಷ್ಟೊಂದೆಲ್ಲಾ ತಿನ್ನೋದೇಗಪ್ಪಾ..!
ಮನೆಗೆ ನೆಂಟರು ಬಂದಾಗ ಬಗೆ ಬಗೆ ಅಡುಗೆ ಮಾಡೋದು ಸಾಮಾನ್ಯ. ಅಬ್ಬಬ್ಬಾ ಅಂದ್ರೆ ನಾಲ್ಕೈದು ಥರದ ಖಾದ್ಯಗಳನ್ನ ರೆಡಿ ಮಾಡ್ತಾರೆ. ಆದರೆ ಇಲ್ಲಿ ಅತ್ತೆಯೊಬ್ಬರು ಮನೆಗೆ ಬಂದ ಅಳಿಯನಿಗೆ ಬರೋಬ್ಬರಿ 379 ಬಗೆಯ ಖಾದ್ಯಗಳನ್ನ ತಯಾರಿಸಿ ಬಡಿಸಿದ್ದಾರೆ.
ಹಬ್ಬಕ್ಕೆ ಮಗಳು ಅಳಿಯ ಮನೆಗೆ ಬರ್ತಾರೆ ಅಂದ್ರೆ ತವರಿನ ಮನೆಯಲ್ಲಿ ಇರುವ ಸಂಭ್ರಮ ಅಷ್ಟಿಷ್ಟಲ್ಲ. ಅದ್ರಲ್ಲೂ ಬಗೆ ಬಗೆ ಅಡುಗೆಗಳನ್ನ ಮಾಡಿ ಉಣಬಡಿಸೋದ್ರಲ್ಲಿ ಅದೇನೋ ಖುಷಿ. ಆದ್ರೆ ಇಲ್ಲಿ ಅತ್ತೆಯ ಮನೆಗೆ ಹಬ್ಬಕ್ಕೆಂದು ಬಂದ ಅಳಿಯ ಥರಹೇವಾರಿ ಖಾದ್ಯಗಳನ್ನ ನೋಡಿ ಹೌಹಾರಿರೋ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಬರೋಬ್ಬರಿ ಒಂದು ವಾರಗಳ ಕಾಲ ತಿಂಡಿಗಳನ್ನ ರೆಡಿ ಮಾಡಿ ಅಳಿಯನ ಮುಂದಿಟ್ಟಿದ್ದಾರೆ. ಅಚ್ಚರಿ ಅನ್ನಿಸಿದ್ರೂ ಇದನ್ನ ನೀವು ನಂಬಲೇಬೇಕು. ಆಂಧ್ರಪ್ರದೇಶದ ಎಲ್ಲೂರು ಪಟ್ಟಣದಲ್ಲಿ ಕುಟುಂಬವೊಂದು ಮಕರ ಸಂಕ್ರಾಂತಿ ಹಬ್ಬದಂದು ತಮ್ಮ ಅಳಿಯನಿಗೆ ಬರೋಬ್ಬರಿ 379 ಖಾದ್ಯಗಳನ್ನ ತಯಾರಿಗೆ ಅಳಿಯನಿಗೆ ಔತಣ ನೀಡಿದ್ದಾರೆ.
ಇದನ್ನೂ ಓದಿ: ಮದುಮಕ್ಕಳಂತೆ ಸಿಂಗಾರಗೊಂಡ ಶ್ವಾನಗಳು! – ಹೇಗಿತ್ತು ನಾಯಿಗಳ ಮದುವೆ?
ಕಳೆದ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಅವಿಭಜಿತ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ಕುಟುಂಬವೊಂದು ತಮ್ಮ ಭಾವಿ ಅಳಿಯನಿಗೆ 365 ಬಗೆಯ ತಿಂಡಿ ತಯಾರಿಸಿ ವೈರಲ್ ಆಗಿತ್ತು. ವಿಶಾಖಪಟ್ಟಣಂ ಸಮೀಪದ ಅನಕಾಪಲ್ಲಿ ಪಟ್ಟಣದ ಬುದ್ಧ ಮುರಳೀಧರ್ ಅವರು ಗೋಧಾವರಿ ಜಿಲ್ಲೆಯ ಯುವತಿಯನ್ನ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಹೀಗಾಗಿ ವರ್ಷದ ಮೊದಲ ಹಬ್ಬಕ್ಕೆ ಬರೋ ಅಳಿಯನಿಗೆ ರಾಜಾತಿಥ್ಯ ನೀಡಬೇಕೆಂದು ಬರೋಬ್ಬರಿ ಒಂದು ವಾರಗಳ ಕಾಲ ಥರಹೇವಾರಿ ತಿಂಡಿಗಳನ್ನ ರೆಡಿ ಮಾಡಿದ್ರು. ಮನೆಗೆ ಬಂದ ಅಳಿಯನಿಗೆ ಬಡಿಸಿದ್ದು ಫೋಟೋಗಳು ಸಖತ್ ವೈರಲ್ ಆಗಿವೆ. ಇತ್ತೀಚೆಗೆ ಅಳಿಯನನ್ನ ಅದ್ಧೂರಿಯಾಗಿ ಉಪಚರಿಸುವ ಸಂಪ್ರದಾಯ ಆಂಧ್ರದ ಕೆಲ ಭಾಗಗಳಲ್ಲಿ ಹೆಚ್ಚಾಗುತ್ತಿದೆ.