ವಾಟರ್ ಹೀಟರ್ ಬಳಸೋ ಮುನ್ನ ಹುಷಾರ್ – ತಾಯಿ, ಮಗು ಬಲಿ.. ಸ್ನಾನದ ಕೋಣೆಯಲ್ಲಿ ಆಗಿದ್ದೇನು?
ಅದೊಂದು ಪುಟ್ಟ ಸಂಸಾರ. ತಂದೆ, ತಾಯಿ ಹಾಗೂ ಮಗ. ಮೂರೇ ಜನರಿದ್ದ ಆ ಕುಟುಂಬದಲ್ಲಿ ಮನೆ ಯಜಮಾನ ದುಡಿಯೋಕೆ ಅಂತಾ ಹೊರಗೆ ಹೋಗಿದ್ರು. ಹೀಗಾಗಿ ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿದ್ರು. ಇದೇ ಗಳಿಗೆಗಾಗಿ ಹೊಂಚು ಹಾಕಿ ಕುಳಿತಿದ್ದ ವಿಧಿ ಇಬ್ಬರ ಜೀವವನ್ನೂ ತೆಗೆದಿದೆ.
ಸಾವು ಹೇಗೆಲ್ಲಾ ಬರುತ್ತೆ ಅನ್ನೋದನ್ನ ಊಹೆ ಮಾಡಿಕೊಳ್ಳೋಕೂ ಆಗಲ್ಲ ಬಿಡಿ. ಇಲ್ಲಿ ನಡೆದಿರೋ ದುರಂತ ಕೂಡ ಅಯ್ಯೋ ಅನ್ನಿಸುವಂತಿದೆ. ಸ್ನಾನದ ಕೋಣೆಯಲ್ಲಿ ಬಕೆಟ್‌ನೊಳಗೆ ನೀರು ಕಾಯಿಸಲು ಹಾಕಿದ್ದ ವಾಟರ್ ಹೀಟರ್ ನಿಂದಾಗಿ ತಾಯಿ ಹಾಗೂ 4 ವರ್ಷದ ಮಗ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ. ವಿಷಯ ಅಂದ್ರೆ ನಿನ್ನೆಯೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಮಗುವಿಗೆ ಜನ್ಮ ಕೊಟ್ಟ ಮೇಲೆ ಕೈ ಕಾಲು ಕಳೆದುಕೊಂಡ ಅಮ್ಮ- ಎರಡು ಮಕ್ಕಳ ತಾಯಿ ಬದುಕಿದ್ದೇ ಹೆಚ್ಚು
ತಾಯಿ ಜ್ಯೋತಿ (25) ಮತ್ತು ಮಗ ಧನಂಜಯ (4) ಮೃತ ದುರ್ದೈವಿಗಳು. ಆಗಿದ್ದೇನಂದ್ರೆ ರಾಯಚೂರು ಮೂಲದವರಾಗಿದ್ದ ಇವರು ಗಾರೆ ಕೆಲಸಕ್ಕೆಂದು ಕುಟುಂಬ ಸಮೇತರಾಗಿ ಬಂದು ಹೊಸಕೋಟೆ ತಾಲೂಕಿನ ಕನಕ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ, ಗಂಡ ಕೆಲಸಕ್ಕೆ ಹೋಗಿದ್ದು, ಕೆಲವೊಂದು ಬಾರಿ 2-3 ದಿನ ಮನೆಗೆ ಬರುತ್ತಿರಲಿಲ್ಲ. ಹೀಗೆ ಗಾರೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಫೋನ್ ಮಾಡಿದರೂ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಬೆಳಗ್ಗೆ ನೆರೆಹೊರೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಪ್ರತಿನಿತ್ಯದಂತೆ ಸ್ನಾನದ ಕೋಣೆಯಲ್ಲಿರುವ ಸಣ್ಣ ಕಟ್ಟೆಯ ಮೇಲೆ ಬಕೆಟ್‌ನಲ್ಲಿ ನೀರನ್ನು ತುಂಬಿಸಿ ಇಟ್ಟು, ಅದರೊಳಗೆ ಕರೆಂಟ್ ವಾಟರ್ ಹೀಟರ್ ಹಾಕಿದ್ದಾರೆ. ಈ ವೇಳೆ ಮಗ ಸ್ನಾನದ ಕೋಣೆಯೊಳಗೆ ಹೋದಾಗ ಬಕೆಟ್ ಜಾರಿಬಿದ್ದು, ಕರೆಂಟ್ ಇದ್ದ ಹೀಟರ್ ಮಗನಿಗೆ ತಾಗಿದೆ. ಕರೆಂಟ್ ಶಾಕ್ ಹೊಡೆದು ಕೂಗಿಕೊಂಡ ಮಗನನ್ನು ರಕ್ಷಣೆ ಮಾಡಲು ತಾಯಿ ಓಡಿ ಬಂದಿದ್ದಾರೆ. ಆದರೆ, ಬಿಸಿ ನೀರು ಸ್ನಾನದ ಕೋಣೆಯಲ್ಲಿ ತುಂಬಿಕೊಂಡಿದ್ದು, ಅದರಲ್ಲಿ ಕರೆಂಟ್ ಕೂಡ ಹರಿಯುತ್ತಿತ್ತು. ಇದನ್ನು ಗಮನಿಸದ ತಾಯಿ ಮಗನನ್ನು ರಕ್ಷಿಸಲು ಮುಂದಾಗಿದ್ದು ಅವರಿಗೂ ಕರೆಂಟ್ ಶಾಕ್ ಉಂಟಾಗಿದೆ. ಹೀಗಾಗಿ, ತಾಯಿ ಜ್ಯೋತಿ ಹಾಗೂ ಮಗ ಧನಂಜಯ ಇಬ್ಬರೂ ಸ್ನಾನದ ಕೋಣೆಯಲ್ಲಿಯೇ ಮೃತಪಟ್ಟಿದ್ದಾರೆ. ಹೊಟ್ಟೆಪಾಡಿಗೆಂದು ರಾಯಚೂರಿನಿಂದ ಬಂದು ಹೊಸಕೋಟೆಯಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಈಗ ತಾಯಿ, ಮಗ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.