ಕಲಿಕೆಗೆ ಬೇಕಿಲ್ಲ ವಯಸಿನ ಹಂಗು..!- ಪಿಯುಸಿ ಪರೀಕ್ಷೆ ಜೊತೆಯಲ್ಲೇ ಬರೆದ ತಾಯಿ, ಮಗಳು ಪಾಸ್

ಕಲಿಕೆಗೆ ಬೇಕಿಲ್ಲ ವಯಸಿನ ಹಂಗು..!- ಪಿಯುಸಿ ಪರೀಕ್ಷೆ ಜೊತೆಯಲ್ಲೇ ಬರೆದ ತಾಯಿ, ಮಗಳು ಪಾಸ್

ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಸನ್ನಿವೇಶಕ್ಕೆ ಸುಳ್ಯ ಸಾಕ್ಷಿಯಾಗಿದೆ. ಸುಳ್ಯ ಜಯನಗರದ ರಮೇಶ್‌ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ. ಮಗಳು ತ್ರಿಷಾ ಸುಳ್ಯದ ಜೂನಿಯರ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಇದನ್ನೂ ಓದಿ: ಬಸ್ಸಿನಲ್ಲಿ ನಿತ್ಯ ಕಾಲೇಜಿಗೆ 50 ಕಿ.ಮೀ ಪ್ರಯಾಣ – ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದ ಕೂಲಿ ಕಾರ್ಮಿಕನ ಪುತ್ರಿ!

ಗೀತಾ ಅವರಿಗೆ ಓದುವ ಆಸಕ್ತಿ ಮೊದಲಿನಿಂದಲೂ ಇತ್ತು. 25 ವರ್ಷದ ಹಿಂದೆ ಗೀತಾ ಅವರ  ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಹೀಗಿದ್ದರೂ ಕೂಡಾ ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್‌ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕೆಲಸ ಮತ್ತು ಮನೆ ಜವಾಬ್ದಾರಿಯ ಜೊತೆಗೂ ಪಿಯುಸಿ ಪರೀಕ್ಷೆಗೆ ಸಿದ್ಧವಾಗಿದ್ದರು. ಗೀತಾ ಅವರ ಆಸಕ್ತಿ ನೋಡಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಇದೀಗ ಗೀತಾ ಪಿಯುಸಿಯಲ್ಲಿ ಉತ್ತೀರ್ಣರಾಗುವ ಮೂಲಕ ಕಲಿಕೆಗೆ ವಯಸಿನ ಹಂಗಿಲ್ಲ. ಆಸಕ್ತಿ ಬೇಕು ಅನ್ನುವುದನ್ನ ತೋರಿಸಿಕೊಟ್ಟಿದ್ದಾರೆ.

suddiyaana