ಕ್ಲಾಸೆನ್ ಗೆ 23, ಕೊಹ್ಲಿಗೆ ₹21 ಕೋಟಿ – ಪಂಜಾಬ್ ಪರ್ಸ್ ನಲ್ಲಿ ₹110.5 ಕೋಟಿ
ಹರಾಜಿನಲ್ಲಿ ಯಾರಿಗೆ ಹೈಯೆಸ್ಟ್ ಬಿಡ್?
ಐಪಿಎಲ್ ಅಂದ್ರೆ ಆಟಗಾರರ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ದೇಶವನ್ನ ಪ್ರತಿನಿಧಿಸಿದ್ರೂ ಸಿಗದೇ ಇರೋವಷ್ಟು ಹಣವನ್ನ ಜಸ್ಟ್ ಮೂರೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನೋ ಹಬ್ಬದಲ್ಲಿ ಜೇಬಿಗಿಳಿಸ್ತಾರೆ. ಕಳೆದ ಬಾರಿಯೇ 20 ಕೋಟಿ+ ಕಾಂಚಾಣ ಎಣಿಸಿದ್ದ ಪ್ಲೇಯರ್ಸ್ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ರು. ಇದೀಗ ಮೆಗಾ ಹರಾಜಿಗೂ ಮುನ್ನವೇ 20 ಕೋಟಿಗೂ ಹೆಚ್ಚು ಹಣವನ್ನ ದಿಗ್ಗಜ ಆಟಗಾರರು ಜೇಬಿಗಿಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಕೂಡ ಇದೇ ಮೊದಲ ಬಾರಿಗೆ ದಾಖಲೆ ಮೊತ್ತದಲ್ಲಿ ಸಂಭಾವನೆ ನೀಡಲಾಗಿದೆ. 2025ರ ಐಪಿಎಲ್ ಆಕ್ಷನ್ಗೂ ಮುನ್ನ ಯಾವ ಫ್ರಾಂಚೈಸಿಗಳು ಅತೀ ಹೆಚ್ಚು ಹಣವನ್ನು ಕೊಟ್ಟು ಆಟಗಾರರನ್ನ ರಿಟೇನ್ ಮಾಡಿಕೊಂಡಿವೆ..? ಬೆಂಗಳೂರಿನ ಕಾಸ್ಟ್ಲಿಯಸ್ಟ್ ಪ್ಲೇಯರ್ ಯಾರು? ರಿಟೇನ್ ಲಿಸ್ಟ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರ್ಯಾರು? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಕೀರ್ತಿ ಕಮ್‌ಬ್ಯಾಕ್.. ಕಾವೇರಿ ಕೃತ್ಯಕ್ಕೆ ಬ್ರೇಕ್ – ವೈಷ್ಣವ್ ನ ಬಿಟ್ಟುಕೊಟ್ಟ ಲಕ್ಷ್ಮೀ?
2025ರ ಐಪಿಎಲ್ಗೂ ಮುನ್ನ ನಡೆಯಲಿರುವ ಮೆಗಾ ಹರಾಜು ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಇದೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರು ಮತ್ತು ಅವರಿಗೆ ನೀಡಿರೋ ಸಂಭಾವನೆ ಮೊತ್ತವನ್ನೂ ರಿವೀಲ್ ಮಾಡಿವೆ. ಅದ್ರಲ್ಲೂ ಈ ಸಲ ಫ್ರಾಂಚೈಸಿಗಳ ಪರ್ಸ್ ಮೊತ್ತವನ್ನ ಬಿಸಿಸಿಐ ಹೆಚ್ಚಿಸಿದ್ದರಿಂದ ಹರಾಜಿಗೂ ಮುನ್ನವೇ ಹಣದ ಹೊಳೆ ಹರಿದಿದೆ. ಕೆಲ ಮಾಲೀಕರು ಸ್ಟಾರ್ ಆಟಗಾರರನ್ನೇ ಹರಾಜಿಗೆ ಬಿಟ್ರೆ ಇನ್ನೂ ಕೆಲವ್ರು ತಮಗೆ ಬೇಕಾದ ಪ್ಲೇಯರ್ಸ್ಗೆ ಕೋಟಿ ಕೋಟಿ ಹಣ ಕೊಟ್ಟು ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಈ ಪೈಕಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ದಾಖಲೆ ಬರೆದಿದೆ. ಈ ಸಲ 10 ಫ್ರಾಂಚೈಸಿಗಳಲ್ಲಿ ಹೈಯೆಸ್ಟ್ ಹಣ ಪಡೆದು ಉಳಿದುಕೊಂಡವರು ಯಾರ್ಯಾರು? ಯಾವ ತಂಡದಲ್ಲಿ ಇನ್ನೆಷ್ಟು ಹಣ ಉಳಿದಿದೆ..? ಇದು ಹೇಗೆ ಪ್ಲಸ್ ಆಗಲಿದೆ ಅನ್ನೋ ವಿವರ ಇಲ್ಲಿದೆ.
ಹೆನ್ರಿಕ್ ಕ್ಲಾಸೆನ್ ಗೆ 23 ಕೋಟಿ ನೀಡಿದ ಹೈದ್ರಾಬಾದ್!
2024ರ ಐಪಿಎಲ್ ಸೀಸನ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ತಂಡ ಸನ್ ರೈಸರ್ಸ್ ಹೈದ್ರಾಬಾದ್. ಆದ್ರೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಸಲ ಕಪ್ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿರೋ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಇಬ್ಬರು ಆಟಗಾರರಿಗೆ 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಖರೀದಿಸಿದ ಏಕೈಕ ತಂಡ ಸನ್ರೈಸರ್ಸ್ ಹೈದರಾಬಾದ್. ಐಪಿಎಲ್ 2024 ರ ಕೊನೆಯ ಹರಾಜಿನಲ್ಲಿ ಫ್ರಾಂಚೈಸಿ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇದೀಗ ಈ ಬಾರಿ ಹೆನ್ರಿಕ್ ಕ್ಲಾಸೆನ್ ಅವರನ್ನು 23 ಕೋಟಿಗೆ ಉಳಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕ್ಲಾಸೆನ್ ಐಪಿಎಲ್ 2023 ರಲ್ಲಿ 448 ರನ್ ಗಳಿಸಿದ್ದರೆ, 2024ರ ಸೀಸನ್ನಲ್ಲಿ ರಲ್ಲಿ 479 ರನ್ ಗಳಿಸಿದ್ದರು. ಎಸ್ಆರ್ಹೆಸ್ ಐವರನ್ನ ಉಳಿಸಿಕೊಂಡಿದ್ದು, ಅದಕ್ಕಾಗಿ 75 ಕೋಟಿ ಖರ್ಚು ಮಾಡಿದೆ. ಇನ್ನು 45 ಕೋಟಿಯೊಂದಿಗೆ ಬಿಡ್ನಲ್ಲಿ ಭಾಗಿಯಾಗಲಿದೆ.
RCBಯ ಅತ್ಯಂತ ದುಬಾರಿ ಆಟಗಾರ ಕಿಂಗ್ ವಿರಾಟ್ ಕೊಹ್ಲಿ!
ಕಿಂಗ್ ವಿರಾಟ್ ಕೊಹ್ಲಿ. ಟೀಂ ಇಂಡಿಯಾದಲ್ಲಿ ವಿರಾಟ್ ಸೌಂಡ್ ಕಡಿಮೆ ಆಗ್ತಿದ್ರೂ ಐಪಿಎಲ್ ನಲ್ಲಿ ಅವ್ರ ಕ್ರೇಜ್ ಬೇರೆಯದ್ದೇ ಲೆವೆಲ್ನಲ್ಲಿ ಇರುತ್ತೆ. ಆರ್ಸಿಬಿ ಮ್ಯಾಚ್ ಇದ್ರಂತೂ ಮುಗ್ದೇ ಹೋಯ್ತು. ವಿರಾಟ್ ನೋಡೋಕಂತ್ಲೇ ಫ್ಯಾನ್ಸ್ ಮೈದಾನಗಳಿಗೆ ಲಗ್ಗೆ ಇಡ್ತಾರೆ. ಡೇ ಒನ್ನಿಂದ ತಂಡಕ್ಕೆ ಲಾಯಲ್ ಆಗಿರೋ ವಿರಾಟ್ಗೆ ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತವನ್ನೇ ಕೊಟ್ಟು ಉಳಿಸಿಕೊಂಡಿದೆ. ಕೊಹ್ಲಿಯನ್ನು ಆರ್ಸಿಬಿ 21 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿದೆ. 36 ವರ್ಷದ ಬಲಗೈ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಆರ್ಸಿಬಿ ಫ್ರಾಂಚೈಸಿ ಮೂವರನ್ನಷ್ಟೇ ಉಳಿಸಿಕೊಂಡಿದ್ದು 37 ಕೋಟಿ ಇನ್ವೆಸ್ಟ್ ಮಾಡಿದೆ. ಫ್ರಾಂಚೈಸಿ ಪರ್ಸ್ನಲ್ಲಿ ಇನ್ನೂ 83 ಕೋಟಿ ಬಾಕಿ ಇದೆ.
ನಿಕೋಲಸ್ ಪೂರನ್ ಗೆ 21 ಕೋಟಿ ಕೊಟ್ಟ ಲಕ್ನೋ!
ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತನ್ನ ಕ್ಯಾಪ್ಟನ್ ಕೆಎಲ್ ರಾಹುಲ್ ರನ್ನ ಕೈ ಬಿಟ್ಟಿದ್ರೂ ಕೂಡ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರನ್ನು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ಪೂರನ್ ಲಕ್ನೋ ತಂಡದ ಅತ್ಯಂತ ದುಬಾರಿ ಆಟಗಾರ. ಈ ಮೂಲಕ ಕೆಎಲ್ ರಾಹುಲ್ ದಾಖಲೆಯನ್ನು ಪೂರನ್ ಮುರಿದಿದ್ದಾರೆ. ಕೆಎಲ್ ರಾಹುಲ್ 2022 ರ ಮೆಗಾ ಹರಾಜಿಗೂ ಮೊದಲು 17 ಕೋಟಿ ರೂಪಾಯಿಗೆ ಲಕ್ನೋ ಫ್ರಾಂಚೈಸಿಗೆ ಸೇರಿದ್ದರು. ಸದ್ಯ ಲಕ್ನೋ ಐವರನ್ನ ರಿಟೇನ್ ಮಾಡಿಕೊಂಡಿದ್ದು, 51 ಕೋಟಿ ನೀಡಿದೆ. ಹಾಗೇ 69 ಕೋಟಿ ಬಾಕಿ ಉಳಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ಇತಿಹಾಸದಲ್ಲೇ ಬುಮ್ರಾ ದುಬಾರಿ ಪ್ಲೇಯರ್!
ಟೀಂ ಇಂಡಿಯಾದಲ್ಲಿ ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜಸ್ಪ್ರೀತ್ ಬುಮ್ರಾಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬಾರಿ ಮೊತ್ತವನ್ನೇ ಕೊಟ್ಟು ಉಳಿಸಿಕೊಂಡಿದೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬುಮ್ರಾರನ್ನ ಫ್ರಾಂಚೈಸಿ 18 ಕೋಟಿಗೆ ಉಳಿಸಿಕೊಂಡಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಈ ಹಿಂದೆ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 17.50 ಕೋಟಿ ರೂ.ಗೆ ಖರೀದಿಸಿತ್ತು. ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ಗ್ರೀನ್ ಖರೀದಿಸಿತ್ತು. ಆದ್ರೆ ಈ ಸಲ ರೋಹಿತ್, ಹಾರ್ದಿಕ್ ಹಾಗೇ ಸೂರ್ಯನಿಗಿಂತ ಬುಮ್ರಾಗೆ ಹೆಚ್ಚು ಮೊತ್ತ ನೀಡಿದೆ. ಮುಂಬೈ ಬ್ರಿಗೇಟ್ನಲ್ಲಿ 75 ಕೋಟಿ ಹಣ ನೀಡಿದ್ದು, 45 ಕೋಟಿಯೊಂದಿಗೆ ಬಿಡ್ಗೆ ಬರಲಿದೆ.
ರಶೀದ್ ಖಾನ್ ಗೆ 18 ಕೋಟಿ ನೀಡಿದ ಗುಜರಾತ್!
ಗುಜರಾತ್ ಟೈಟನ್ಸ್ ರಶೀದ್ ಖಾನ್ ಅವರನ್ನು 18 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ರಶೀದ್ ಗುಜರಾತ್ ಟೈಟನ್ಸ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2022ರ ಹರಾಜಿನಲ್ಲಿ ರಶೀದ್ ಅವರನ್ನು ಈ ಫ್ರಾಂಚೈಸಿ 15 ಕೋಟಿ ರೂ.ಗೆ ಖರೀದಿಸಿತ್ತು. ರಶೀದ್ 45 ಪಂದ್ಯಗಳಲ್ಲಿ 56 ವಿಕೆಟ್ ಉರುಳಿಸಿದ್ದು, 323 ರನ್ ಗಳಿಸಿದ್ದಾರೆ. ಇನ್ನು ಜಿಟಿ ಫ್ರಾಂಚೈಸಿ ಆಟಗಾರರಿಗೆ 51 ಕೋಟಿ ಇನ್ವೆಸ್ಟ್ ಮಾಡಿದ್ರೆ 69 ಕೋಟಿ ಬ್ಯಾಲೆನ್ಸ್ ಇಟ್ಟುಕೊಂಡಿದೆ.
ಚೆನ್ನೈನಲ್ಲಿ ರುತುರಾಜ್ ಗಾಯಕ್ವಾಡ್ ಗೆ 18 ಕೋಟಿ ಸಂಭಾವನೆ!
ಐಪಿಎಲ್ ಇತಿಹಾಸದಲ್ಲಿ ಯಶಸ್ವೀ ತಂಡ ಎನಿಸಿಕೊಂಡಿರೋ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹರಾಜಿಗೂ ಮುನ್ನ ಐವರು ಆಟಗಾರರನ್ನ ಉಳಿಸಿಕೊಂಡಿದೆ. ಅದ್ರಲ್ಲೂ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 18 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ಗಾಯಕ್ವಾಡ್ ಸಿಎಸ್ಕೆ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 2023 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಫ್ರಾಂಚೈಸಿ 16.25 ಕೋಟಿಗೆ ಖರೀದಿಸಿತ್ತು. ಆದ್ರೆ ಈ ಸಲ ಅದಕ್ಕೂ ಹೆಚ್ಚಿನ ಹಣವನ್ನ ಗಾಯಕ್ವಾಡ್ಗೆ ನೀಡಿದೆ. ಸಿಎಸ್ಕೆ ಬಳಿ 65 ಕೋಟಿ ಖರ್ಚಾಗಿದ್ದು, 55 ಕೋಟಿ ಉಳಿದಿದೆ.
ಸಂಜು ಸ್ಯಾಮ್ಸನ್ & ಜೈಸ್ವಾಲ್ ಗೆ ರಾಜಸ್ಥಾನದಲ್ಲಿ ತಲಾ 18 ಕೋಟಿ!
ಟೀಂ ಇಂಡಿಯಾ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಲಾ 18 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ಈ ಇಬ್ಬರು ಆಟಗಾರರು ತಮ್ಮ ಫ್ರಾಂಚೈಸಿಗೆ ಜಂಟಿಯಾಗಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ರಾಜಸ್ಥಾನ ಫ್ರಾಂಚೈಸಿ ಒಟ್ಟು 6 ಆಟಗಾರರನ್ನ ಉಳಿಸಿಕೊಂಡಿದ್ದು, ರಿಟೇನ್ಗೆ 79 ಕೋಟಿ ರೂಪಾಯಿ ಖರ್ಚು ಮಾಡಿದೆ. ಹಾಗೇ ಫ್ರಾಂಚೈಸಿ ಪರ್ಸ್ನಲ್ಲಿ 41 ಕೋಟಿ ರೂಪಾಯಿ ಉಳಿದಿದ್ದು, 2025ರ ಮೆಗಾ ಆಕ್ಷನ್ನಲ್ಲಿ ಉಳಿದ ಆಟಗಾರರನ್ನ ಖರೀದಿ ಮಾಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇತಿಹಾಸದಲ್ಲೇ ಕಾಸ್ಟ್ಲಿ ಪ್ಲೇಯರ್ ಅಕ್ಷರ್ ಪಟೇಲ್!
ಐಪಿಎಲ್ ಇತಿಹಾಸದಲ್ಲಿ ಈವರೆಗೂ ಕೂಡ ಚಾಂಪಿಯನ್ಸ್ ಪಟ್ಟಕ್ಕೇರದ ಡೆಲ್ಲಿ ಕ್ಯಾಪಿಟಲ್ಸ್ 2025ರ ಐಪಿಎಲ್ಗೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹರಾಜಿಗೂ ಮುನ್ನ ನಾಲ್ವರನ್ನ ಉಳಿಸಿಕೊಂಡಿದ್ದು, ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ 16.50 ಕೋಟಿ ರೂಪಾಯಿ ಸಂಭಾವನೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಇತಿಹಾಸದಲ್ಲಿ ಅಕ್ಷರ್ ಪಟೇಲ್ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ನ ಅತ್ಯಂತ ದುಬಾರಿ ಆಟಗಾರರೆಂದರೆ ರಿಷಭ್ ಪಂತ್ ಮತ್ತು ಯುವರಾಜ್ ಸಿಂಗ್ ಇಬ್ಬರನ್ನ ದೆಹಲಿ 16 ಕೋಟಿಗೆ ಸೇರಿಸಿಕೊಂಡಿತ್ತು. ಇನ್ನು ಡೆಲ್ಲಿ ತಂಡದ ಬಳಿ 47 ಕೋಟಿ ಖರ್ಚಾಗಿದ್ದು, 73 ಕೋಟಿ ಪರ್ಸ್ನಲ್ಲಿದೆ.
ಕ್ಯಾಪ್ಟನ್ ಶ್ರೇಯಸ್ ಔಟ್.. ರಿಂಕುಗೆ 13 ಕೋಟಿ ನೀಡಿದ ಕೆಕೆಆರ್!
ಕಳೆದ ಸೀಸನ್ನ ಚಾಂಪಿಯನ್ ಕೆಕೆಆರ್ ಫ್ರಾಂಚೈಸಿ ಈ ಸಲ ಹರಾಜಿಗೂ ಮುನ್ನ ನಾಯಕನಿಗೇ ಗೇಟ್ಪಾಸ್ ನೀಡಿದೆ. ಶ್ರೇಯಸ್ ಅಯ್ಯರ್ ರಿಲೀಸ್ ಮಾಡಿದ್ದು, ತಂಡದ ಇತರೆ ಆರು ಆಟಗಾರನ್ನ ಉಳಿಸಿಕೊಂಡಿದೆ. ಅದ್ರಲ್ಲೂ ರಿಂಕು ಸಿಂಗ್ಗೆ 13 ಕೋಟಿ ರೂಪಾಯಿ ಸಂಭಾವನೆ ಮೊತ್ತ ಹೆಚ್ಚಿಸಿದೆ. ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್ಗೆ ತಲಾ 12 ಕೋಟಿ ರೂಪಾಯಿ ನೀಡಿದ್ದು, ಹರ್ಷಿತ್ ರಾಣಾ ಮತ್ತು ರಮಣ್ದೀಪ್ ಸಿಂಗ್ರನ್ನ ಅನ್ ಕ್ಯಾಪ್ಡ್ ಆಟಗಾರರ ಲಿಸ್ಟ್ನಲ್ಲಿ ತಲಾ 4 ಕೋಟಿ ರೂಪಾಯಿ ಹಣ ನೀಡಿದೆ. ಈ ಮೂಲಕ ಒಟ್ಟು ಆರು ಆಟಗಾರರು ರಿಟೇನ್ ಆಗಿದ್ದು, 57 ಕೋಟಿ ರೂಪಾಯಿ ಇನ್ವೆಸ್ಟ್ ಮಾಡಿದೆ. 120 ಕೋಟಿ ಪೈಕಿ ಇನ್ನೂ 63 ಕೋಟಿ ರೂಪಾಯಿ ಉಳಿದಿದೆ.
ಇಬ್ಬರು ಅನ್ ಕ್ಯಾಪ್ಡ್ ಆಟಗಾರರಿಗಷ್ಟೇ ಪಂಜಾಬ್ ಮಣೆ!
17 ಸೀಸನ್ಗಳ ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಕೂಡ ಕಪ್ ಗೆದ್ದಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ತಂಡ ಕಳೆದ 10 ಸೀಸನ್ಗಳಿಂದ ಒಮ್ಮೆಯೂ ಪ್ಲೇಆಫ್ ಹಂತಕ್ಕೂ ತಲುಪಿಲ್ಲ. ಸ್ಟಾರ್ ಪ್ಲೇಯರ್ಸ್ ಕೊರತೆ ಎದುರಿಸ್ತಿರೋ ಪ್ರೀತಿ ಜಿಂಟಾ ಒಡೆತನದ ಫ್ರಾಂಚೈಸಿ ಈ ಸಲ ದಿಟ್ಟ ಹೆಜ್ಜೆ ಇಟ್ಟಿದೆ. ಇಬ್ಬರು ಅನ್ ಕ್ಯಾಪ್ಡ್ ಆಟಗಾರರನ್ನ ಮಾತ್ರವೇ ಉಳಿಸಿಕೊಂಡು ಮಿಕ್ಕವರಿಗೆಲ್ಲಾ ಗೇಟ್ ಪಾಸ್ ನೀಡಿದೆ. ವಿಕೆಟ್ ಕೀಪರ್ & ಓಪನರ್ ಪ್ರಭಾಸಿಮ್ರಾನ್ ಸಿಂಗ್ ಮತ್ತು ಪವರ್-ಫಿನಿಶರ್ ಶಶಾಂಕ್ ಸಿಂಗ್ ಇಬ್ಬರನ್ನ ಮಾತ್ರ ಉಳಿಸಿಕೊಂಡಿದೆ. ಶಶಾಂಕ್ ಸಿಂಗ್ಗೆ 5.5 ಕೋಟಿ ನೀಡಿದ್ರೆ ಪ್ರಭಾಸಿಮ್ರಾನ್ಗೆ 4 ಕೋಟಿ ನೀಡಿದೆ. ಈ ಮೂಲಕ ಹರಾಜಿನಲ್ಲಿ ಕಂಪ್ಲೀಟ್ ಹೊಸ ತಂಡ ಕಟ್ಟೋಕೆ ಪ್ಲ್ಯಾನ್ ಮಾಡಿದೆ. ಅದೂ ಅಲ್ದೇ ಪಂಜಾಬ್ ಪರ್ಸ್ನಲ್ಲಿ ಒಟ್ಟಾರೆ 110.5 ಕೋಟಿ ಮೊತ್ತ ಇದ್ದು ಈ ಸಲ ಹೈಯೆಸ್ಟ್ ಬಿಡ್ ಮಾಡೋ ಪ್ಲ್ಯಾನ್ನಲ್ಲಿದೆ.
ಹೀಗೆ ಹರಾಜಿಗೂ ಮುನ್ನ ಐಪಿಎಲ್ ಫ್ರಾಂಚೈಸಿಗಳು ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿದಿವೆ. ಅಲ್ದೇ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಲ್ ರಾಹುಲ್, ಚಹಾಲ್, ಶಮಿ, ಇಶಾನ್ ಕಿಶನ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಹರಾಜಿನಲ್ಲಿ ಭಾಗಿಯಾಗಲಿದೆ. ಸೋ ಅಲ್ಲೂ ಕೂಡ ದಾಖಲೆಯ ಮೊತ್ತದಲ್ಲಿ ಬಿಡ್ ಆದ್ರೂ ಅಚ್ಚರಿ ಪಡ್ಬೇಕಿಲ್ಲ. ಕಳೆದ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದೇ ಸಾರ್ವಕಾಲಿಕ ದಾಖಲೆಯಾಗಿದೆ. ಇದನ್ನ ಯಾರು ಬ್ರೇಕ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.