ಮೊರಾಕೊದಲ್ಲಿ ಪ್ರಬಲ ಭೂಕಂಪ -ಸಾವಿನ ಸಂಖ್ಯೆ 632ಕ್ಕೆ ಏರಿಕೆ, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ರಬತ್: ಆಫ್ರಿಕಾದ ಮೊರಾಕೊದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 632ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 350ಕ್ಕೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ (ಸೆ.8) ತಡರಾತ್ರಿ ಮೊರಾಕೊದಲ್ಲಿ6.8 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಸಾವುನೋವುಗಳು ವರದಿಯಾಗಿವೆ. ಸಾವಿನ ಸಂಖ್ಯೆ 632ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ನಗರ ಮತ್ತು ಪಟ್ಟಣದ ಹೊರಭಾಗಗಳಲ್ಲೇ ಅತಿ ಹೆಚ್ಚು ಹಾನಿಯಾಗಿದೆ ಎಂದು ಮೊರಾಕೊದ ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಇನ್ನು ಅಂದಾಜು ಮಾಡಿಲ್ಲ.
ಇದನ್ನೂ ಓದಿ: ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ – 300ಕ್ಕೂ ಹೆಚ್ಚು ಮಂದಿ ಸಾವು
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಭೂಕಂಪವು ರಾತ್ರಿ 11:11 ಗಂಟೆಗೆ (22:11 GMT) 44 ಮೈಲಿಗಳು (71 ಕಿಲೋಮೀಟರ್) ನೈರುತ್ಯಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಮಾರಕೇಶ್‌ನ ನೈಋತ್ಯಕ್ಕೆ ಅಪ್ಪಳಿಸಿದೆ. ಭೂಕಂಪನದ ಬೆನ್ನಲ್ಲೇ ಜನರು ಭಯಭೀತರಾಗಿ ಮನೆಗಳಿಂದ ಓಡಿಹೋಗಿದ್ದಾರೆ. ಭೂಕಂಪದಿಂದ ಐತಿಹಾಸಿಕ ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ವಿದ್ಯುತ್ ಕಡಿತವೂ ಆಗಿದೆ ಎಂದು ತಿಳಿದುಬಂದಿದೆ.
ಮೊರೊಕೊ ಭೂಕಂಪನದಲ್ಲಿ ಮೃತಪಟ್ಟವರಿಗೆ ವಿಶ್ವದ ನಾಯಕರು ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇಂದು ಜಿ-20 ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ದುಃಖದ ಸಮಯದಲ್ಲಿ ಇಡೀ ಜಗತ್ತು ಮೊರಾಕೊ ಜೊತೆಗಿದೆ. ನಾವು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.