ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂತು ಭರ್ಜರಿ ಕಾಣಿಕೆ! ಇತಿಹಾಸದಲ್ಲೇ  ಮೊದಲ ಬಾರಿಗೆ ಗರಿಷ್ಠ ಆದಾಯ!

ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂತು ಭರ್ಜರಿ ಕಾಣಿಕೆ! ಇತಿಹಾಸದಲ್ಲೇ  ಮೊದಲ ಬಾರಿಗೆ ಗರಿಷ್ಠ ಆದಾಯ!

ರಾಯಚೂರು: ಭಕ್ತರ ಪಾಲಿನ ಕಲ್ಪವೃಕ್ಷ ಮಂತ್ರಾಲಯದ ರಾಯರ ಮಠಕ್ಕೆ ಭಕ್ತರ ದಂಡು ಹರಿದು ಬಂದಿದೆ. ಕಳೆದ 34 ದಿನಗಳಲ್ಲಿ ಮುಕ್ಕೋಟಿ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ.

ರಾಯರ ಕ್ಷೇತ್ರ ಮಂತ್ರಾಲಯ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹೀಗಾಗಿ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಆಗಮಿಸಿ ರಾಯರ ದರ್ಶನ ಪಡೆಯುತ್ತಾರೆ. ಶ್ರೀ ರಾಘವೇಂದ್ರಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಆ.29 ರಿಂದ ಸೆ.4 ರವರೆಗೆ ನಡೆದಿದ್ದು.ಈ ವೇಳೆ ಲಕ್ಷಾಂತರ ಭಕ್ತರು ಶ್ರೀಮಠದ ದರ್ಶನ ಪಡೆದಿದ್ದಾರೆ. ಇದೀಗ ಕಳೆದ 34  ದಿನಗಳಲ್ಲಿ ಮುಕ್ಕೋಟಿ ಆದಾಯ ಹರಿದು ಬಂದಿದೆ.

ಇದನ್ನೂ ಓದಿ: ಹಾಡು ಬದಲಿಸಿದ್ದು ಕಾವೇರಿ ಅನ್ನೋ ನಿಜ ಗೊತ್ತಾಗುತ್ತಾ? – ವೈಷ್ಣವ್‌ಗೆ ಸತ್ಯ ಗೊತ್ತಾದರೆ ಮುಂದೇನು?

ಶ್ರೀ ಮಠದ ಹುಂಡಿಗಳಲ್ಲಿ ಕಳೆದ 34 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಎಣಿಸಲಾಗಿದೆ. ಮೊದಲ ಬಾರಿ ಗರಿಷ್ಠ 3,82,59,839 ರೂ. ಕಾಣಿಕೆ ಸಂಗ್ರಹವಾಗಿದೆ. ನಗದು ಜತೆಗೆ 53 ಗ್ರಾಂ ಚಿನ್ನ ಮತ್ತು 1200 ಗ್ರಾಂ ಬೆಳ್ಳಿಯನ್ನೂ ಭಕ್ತರು ರಾಯರಿಗೆ ಅರ್ಪಿಸಿದ್ದಾರೆ. ಇದು ಕಳೆದ ನಾಲ್ಕು ತಿಂಗಳಲ್ಲಿಅತೀ ಹೆಚ್ಚು ಕಾಣಿಕೆ ಹುಂಡಿಯ ಎಣಿಕೆ ವೇಳೆ ಪತ್ತೆಯಾಗಿದೆ. ಶ್ರೀ ಮಠದ ಇತಿಹಾಸದಲ್ಲಿಯೇ ಮೊದಲ ಬಾರಿ ಗರಿಷ್ಠ ಆದಾಯ ಎಂದು ವರದಿಯಾಗಿದೆ.

ಕರ್ನಾಟಕ ರಾಜ್ಯದ ಶಕ್ತಿ ಯೋಜನೆಯೂ ಮಂತ್ರಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಗಣನೀಯ ಹೆಚ್ಚುವಂತೆ ಮಾಡಿದೆ. ರಜಾ ದಿನಗಳಷ್ಟೇ ಅಲ್ಲದೆ ಸಾಮಾನ್ಯ ದಿನಗಳಲ್ಲೂ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ದೌಡಾಯಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇನ್ನು ಜೂನ್‌ ತಿಂಗಳಿನಿಂದ ರಾಯರ ಮಠದ ಕಾಣಿಕೆ ಹುಂಡಿಯ ಆದಾಯ ಗಣಣೀಯವಾಗಿ ಏರಿಕೆ ಕಂಡಿದೆ. ಜೂನ್‌ ತಿಂಗಳಿನಲ್ಲಿ 2,89,96,295 ರೂ., ಜುಲೈನಲ್ಲಿ3,76,67,469 ರೂ., ಆಗಸ್ಟ್‌ನಲ್ಲಿ 2,35,62,719 ರೂ. ಕಾಣಿಕೆ ಸಂದಾಯವಾಗಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 12,84,86,322 ರೂ. ಕಾಣಿಕೆ ಮಂತ್ರಾಲಯ ಮಠದ ಹುಂಡಿ ಸೇರಿದೆ.

Shwetha M