ಗೃಹಜ್ಯೋತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ – ಎರಡನೇ ದಿನಕ್ಕೆ ನೋಂದಣಿ ದುಪ್ಪಟ್ಟು
ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ಜೂ 18 ರಂದು ಅರ್ಜಿ ಸಲ್ಲಿಕೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಮೊದಲ ದಿನ 55 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದರೆ, ಎರಡನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿದೆ.
200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿತ್ತು. ಮೊದಲ ದಿನವೇ ಗ್ರಾಹರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೋಮವಾರ 1,61,958 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮೊಟ್ಟೆ ಮೊದಲಾ.. ಕೋಳಿ ಮೊದಲಾ? – ಮಿಲಿಯನ್ ಡಾಲರ್ ಪ್ರಶ್ನೆಗೆ ವಿಜ್ಞಾನಿಗಳಿಂದ ಕೊನೆಗೂ ಉತ್ತರ!
ಬೆಳಗ್ಗೆಯಿಂದ ಸಂಜೆ 5.30 ರವರೆಗೆ ಗ್ರಾಹಕರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸೋಮವಾರ ಬೆಂಗಳೂರು ಒನ್, ಗ್ರಾಮ ಒನ್, ಬೆಸ್ಕಾಂ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಜನರು ಸರ್ಕಾರದ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದರು. ಆದರೆ, ತಾಂತ್ರಿಕ ದೋಷಗಳು ಹಲವು ಸ್ಥಳಗಳಲ್ಲಿ ಗೊಂದಲ ಮತ್ತು ವಿಳಂಬವನ್ನು ಉಂಟುಮಾಡಿದವು. ಇದರಿಂದಾಗಿ ಜನರು ಸರತಿ ಸಾಲಿನಲ್ಲೇ ಎರಡು ಗಂಟೆಗಳ ಕಾಲ ಕಾಯಬೇಕಾಯಿತು. ಅನೇಕ ಅರ್ಜಿದಾರರು ಭಾನುವಾರದಿಂದ ಆನ್‌ಲೈನ್‌ನಲ್ಲೇ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಲ್ಲೂ ತಾಂತ್ರಿಕ ದೋಷ ಎದುರಾಗಿದ್ದು, ಇದೀಗ ಸುದೀರ್ಘ ಸರತಿಯಲ್ಲಿ ನಿಲ್ಲುವಂತೆ ಮಾಡಿದೆ.