ಜೀವಜಲವಾಯ್ತು ಜೀವಕ್ಕೆ ಕಂಟಕ – ಚಿತ್ತಾಪುರದಲ್ಲಿ 80ಕ್ಕೂ ಹೆಚ್ಚು ಜನ ಅಸ್ವಸ್ಥ

ಜೀವಜಲವಾಯ್ತು ಜೀವಕ್ಕೆ ಕಂಟಕ – ಚಿತ್ತಾಪುರದಲ್ಲಿ 80ಕ್ಕೂ ಹೆಚ್ಚು ಜನ ಅಸ್ವಸ್ಥ

ಊರಿಗೆ ಊರೇ ಹಾಸಿಗೆ ಹಿಡಿದಿರುವ ಕರುಣಾಜನಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರು ಕಲುಷಿತಗೊಂಡ ಪರಿಣಾಮ ಗ್ರಾಮದಲ್ಲಿ 80ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು ಮಹಿಳೆ ಸಾವು!

ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಕಲುಷಿತ ನೀರು ದುರಂತ ಪ್ರಕರಣ ಸಂಭವಿಸಿದೆ. ಸುಮಾರು ಮೂರು ಸಾವಿರ ಜನರಿರೋ ಗ್ರಾಮದಲ್ಲಿ 80ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಈ ಹಿಂದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿತ್ತು. ಇದೀಗ ಮತ್ತೆ ರಾಯಚೂರು ಜಿಲ್ಲೆಯ ಮತ್ತೊಂದು ತಾಲೂಕಿನಲ್ಲಿ ಕಲುಷಿತ ನೀರು ದುರಂತ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿದ್ದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ವಿಪರ್ಯಾಸವೆಂದರೆ, ಈ ಗ್ರಾಮದ ಜನರ ಪರಿಸ್ಥಿತಿ ಹೇಗಿದೆ ಎಂದರೆ ಅಸ್ವಸ್ಥಗೊಂಡವರು ಮನೆ ಮುಂದೆ ನರಳಾಡುತ್ತಿದ್ದಾರೆ. ಮನೆಯಂಗಳದಲ್ಲಿ ಮಲಗಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಕುಡಿಯುವ ನೀರೇ ಹೀಗೆ ಕಲುಷಿತಗೊಂಡರೆ, ಜನ ಬದುಕುವುದು ಹೇಗೆ ಎಂಬ ಚಿಂತೆ ಶುರುವಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುಲಾಗುತ್ತಿದ್ದರೂ, ದಿನೇ ದಿನೇ ಅಸ್ವಸ್ಥಗೊಂಡವರ ಸಂಖ್ಯೆ ಏರುತ್ತಿದೆ. ಇಷ್ಟೆಲ್ಲಾ ಆದರೂ ಚಿತ್ತಾಪುರ ಪಂಚಾಯಿತಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ನಿತ್ಯ ನಾಲ್ಕೈದು ಹೊಸ ಪ್ರಕರಣಗಳು ಉಲ್ಬಣವಾಗುತ್ತಿವೆ. ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆಯೂ ಗ್ರಾಮಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ. ಚಿತ್ತಾಪುರ ಪಂಚಾಯಿತಿ ಪಿಡಿಓ ಶಶಿಕಲಾ ಪಾಟೀಲ್ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.

suddiyaana