ಅವಧಿ ಮುಗಿದ ಕುರ್ಕುರೆ ತಿಂದು 40ಕ್ಕೂ ಹೆಚ್ಚು ಕುರಿಗಳು ಸಾವು
ರಾಣೆಬೆನ್ನೂರ: ಅವಧಿ ಮುಗಿದ ಕುರ್ಕುರೆ ಮಾಡುವ ಪದಾರ್ಥ ತಿಂದು 40 ಕ್ಕೂ ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಗೋಡ ಗ್ರಾಮದ ಬಳಿ ನಡೆದಿದೆ.
ಖಾಸಗಿ ಕಂಪನಿಗೆ ಸಂಬಂಧಿಸಿದ ಅವಧಿ ಮುಗಿದ ಕುರಕುರೆ ಮಾಡುವ ಪದಾರ್ಥಗಳನ್ನು ಮಾಗೋಡ ಗ್ರಾಮದ ಬಳಿ ಎನ್‌ಎಚ್-48ರ ಸರ್ವೀಸ್ ರಸ್ತೆ ಬದಿ ಯಾರೋ ಎಸೆದು ಹೋಗಿದ್ದರು. ಸೋಮಪ್ಪ ಅವರ ಕುರಿಗಳು ಆಹಾರ ಸೇವಿಸುವ ಸಮಯದಲ್ಲಿ ಅವಧಿ ಮುಗಿದ ಪದಾರ್ಥಗಳನ್ನು ತಿಂದಿವೆ. ಇದರಿಂದಾಗಿ 40ಕ್ಕೂ ಅಧಿಕ ಕುರಿಗಳು ಮೃತಪಟ್ಟಿದ್ದರೆ, 20ಕ್ಕೂ ಅಧಿಕ ಕುರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿವೆ. ಘಟನಾ ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿ ಸಾವಿನ ಬಳಿಕವೂ ಆತನ ಪ್ರಜ್ಞೆ ಜಾಗೃತವಾಗಿರುತ್ತದೆ – ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ
ಅವಧಿ ಮುಗಿದ ಪದಾರ್ಥ ತಿಂದು ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಬದಿ ಅವಧಿ ಮುಗಿದ ಪದಾರ್ಥ ಚೆಲ್ಲಿದ ಖಾಸಗಿ ಕಂಪನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕುರಿ ಮೃತಪಟ್ಟು ನಷ್ಟ ಅನುಭವಿಸಿದ ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುರಿ ಮಾಲೀಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಕುರಿ ಸಾಕಾಣಿಕೆದಾರ ಸಂಘಗಳ ಮಹಾಮಂಡಳಿಯ ನಿರ್ದೇಶಕ ಜೆ. ಜಯಪ್ಪ ಮಾತನಾಡಿ, ರಸ್ತೆಯ ಮೇಲೆ ಅವಧಿ ಮುಗಿದಿರುವ ಪದಾರ್ಥ ಚೆಲ್ಲಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರಾಜ್ಯಾದ್ಯಂತ ಆ ಕಂಪನಿ ಬಂದ್ ಮಾಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಕುರಿಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಮೃತ ಕುರಿಗಳ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಸ್ಥಳೀಯ ಶಾಸಕರ ಸಲಹೆ ಪಡೆದು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.