ಬಾಲರಾಮನನ್ನು ಕಣ್ತುಂಬಿಕೊಳ್ಳಲು ಜನವೋ ಜನ – 11 ದಿನದಲ್ಲಿ 25 ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ!
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಬಾಲ ರಾಮನ ದರ್ಶನಕ್ಕಾಗಿ ನಿತ್ಯ ಲಕ್ಷಾಂತರ ಮಂದಿ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಕಳೆದ 11 ದಿನಗಳಲ್ಲಿ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಮಂದಿ ಮರ್ಯಾದಾ ಪುರುಷೋತ್ತಮನ ದರ್ಶನ ಪಡೆಯುತ್ತಿದ್ದಾರೆ. ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಸುಮಾರು 11 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಇದನ್ನೂ ಓದಿ: ಜಗತ್ತಿನ ಅತಿ ಶ್ರೀಮಂತ ಕುಟುಂಬ ಇವರದ್ದು! – ಮಸ್ಕ್ ಅಲ್ಲ.. ಈ ದೊರೆಯ ಐಷಾರಾಮಿತನ ಹೇಗಿದೆ ಗೊತ್ತಾ?
ದೇವಾಲಯದ ಟ್ರಸ್ಟ್‍ನ ಕಚೇರಿ ಪ್ರಭಾರಿ ಪ್ರಕಾಶ್ ಗುಪ್ತಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂ.ಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಭಕ್ತರು ಹಾಕಿದ್ದಾರೆ. ಚೆಕ್ ಮತ್ತು ಆನ್‍ಲೈನ್ ಮೂಲಕ ಪಡೆದ ಮೊತ್ತ ಸುಮಾರು 3.50 ಕೋಟಿ ರೂ. ಆಗಿದೆ. ದೇಗುಲದ ಗರ್ಭಗುಡಿಯಲ್ಲಿ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದ್ದು, ಅದರಲ್ಲಿ ಭಕ್ತರು ದೇಣಿಗೆಯನ್ನು ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇದರೊಂದಿಗೆ 10 ಗಣಕೀಕೃತ ಕೌಂಟರ್‌ಗಳಲ್ಲಿ ಜನರು ದೇಣಿಗೆ ನೀಡುತ್ತಾರೆ. ದೇಣಿಗೆ ಕೌಂಟರ್‌ನಲ್ಲಿ ದೇವಸ್ಥಾನದ ಟ್ರಸ್ಟ್ ನೌಕರರನ್ನು ನೇಮಿಸಲಾಗಿದೆ. ಸಂಜೆ ಕೌಂಟರ್ ಮುಚ್ಚಿದ ನಂತರ ಟ್ರಸ್ಟ್ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕವನ್ನು ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಮೂವರನ್ನು ಒಳಗೊಂಡ 14 ಜನರ ತಂಡವು ನಾಲ್ಕು ಕಾಣಿಕೆ ಪೆಟ್ಟಿಗೆಗಳಲ್ಲಿ ಕಾಣಿಕೆಗಳನ್ನು ಎಣಿಸುತ್ತದೆ. ದೇಣಿಗೆ ಮೊತ್ತವನ್ನು ಠೇವಣಿ ಇಡುವುದರಿಂದ ಹಿಡಿದು ಎಣಿಸುವವರೆಗೆ ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.