ಉತ್ತರಕನ್ನಡದಲ್ಲಿ ಜಲಸಾಹಸ ಕ್ರೀಡೆಗೆ ಬ್ರೇಕ್! – ಕಡಲ ತೀರದಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಗೂ ನಿರ್ಬಂಧ!

ಉತ್ತರ ಕನ್ನಡದ ದಾಂಡೇಲಿ- ಜೊಯಿಡಾ ಎಂದರೆ ಟೂರಿಸ್ಟ್‌ಗಳಿಗೆ ಪಂಚಪ್ರಾಣ. ಇಲ್ಲಿನ ಅರಣ್ಯ- ಪರಿಸರ ಪ್ರವಾಸೋದ್ಯಮ , ಜಲಸಾಹಸ ಕ್ರೀಡೇಗಳೇ ಈ ಎರಡೂ ತಾಲೂಕುಗಳ ಮೂಲ ಆಧಾರ. ಈ ಜಿಲ್ಲೆ ಜಲಸಾಹಸ ಕ್ರೀಡೆಯಿಂದಲೇ ಪ್ರಸಿದ್ಧಿ ಪಡೆದಿದೆ. ಹೀಗಾಗೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿನೀಡುತ್ತಿದ್ದಾರೆ. ಆದ್ರೀಗ ಪ್ರವಾಸಿಗರಿಗೆ ಶಾಕಿಂಗ್ ಸುದ್ದಿಯಿದೆ. ಇದೀಗ ಜಲಸಾಹಸ ಕ್ರೀಡೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.
ಇದನ್ನೂ ಓದಿ: ಅಪ್ಪ- ಅಮ್ಮ Sorry.. ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ! – ತಾಯಿ ಬೈದಿದ್ದಕ್ಕೆ ಮಕ್ಕಳ ದುಡುಕಿನ ನಿರ್ಧಾರ!
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದಿನಿಂದ (ಮೇ 19) ಮಳೆಗಾಲ ಮುಕ್ತಾಯವರೆಗೆ ಜಲಸಾಹಸ ಕ್ರೀಡೆಗೆ ನಿರ್ಬಂಧ ವಿಧಿಸಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆದೇಶ ಹೊರಡಿಸಿದೆ. ಹವಾಮಾನ ವೈಪರಿತ್ಯ ಹಿನ್ನೆಲೆ ಅರಬ್ಬಿ ಸಮುದ್ರ, ಶರಾವತಿ ಹಿನ್ನೀರು ಮತ್ತು ಅಘನಾಶಿನಿ ನದಿಯಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದೀಗ ನೀರಲ್ಲಿ ಮೋಜು ಮಸ್ತಿ ಮಾಡಲೆಂದೇ ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದ ಪ್ರವಾಸಿಗರಿಗೆ ಭಾರಿ ನಿರಾಸೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮುಖ್ಯ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಹಾಫ್‌ಮೂನ್ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬೀಚ್ ಮತ್ತು ಕಾರವಾರ ಬೀಚ್ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆಗೆ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿತ್ತು. ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲೂ ಅನುಮತಿ ನೀಡಲಾಗಿತ್ತು. ಹಾಗೆಯೇ ಕುಮಟಾ ತಾಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಇವೆಲ್ಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರೋದಾಗಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ತಿಳಿಸಿದೆ.
ಇನ್ನು ಜೊತೆಗೆ ಹೊನ್ನಾವರದ ಅಪ್ಸರಕೊಂಡ ಕಡಲ ತೀರದಲ್ಲಿ ಪ್ರೀ ವೆಡ್ಡಿಂಗ್ ಸೆಟ್ ಅಳವಡಿಕೆಗೂ ಅವಕಾಶ ಇರುವುದಿಲ್ಲ. ಹವಾಮಾನ ಇಲಾಖೆಯಿಂದ ಚಂಡಮಾರುತ ಹಾಗೂ ಭಾರಿ ಗಾಳಿ ಬೀಸುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಳೆಗಾಲ ಕೂಡ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆ ಕಡಲತೀರಗಳಲ್ಲಿ ಹಾಗೂ ನದಿತೀರಗಳಲ್ಲಿ ನಡೆಸುತ್ತಿರುವ ಜಲಸಾಹಸ ಕ್ರೀಡೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೋಡಿರಿ

