ಮಳೆಯ ಅಭಾವದಿಂದ ಕಂಗೆಟ್ಟ ಕರ್ನಾಟಕ – ದೇಶದಾದ್ಯಂತ 200 ಜಿಲ್ಲೆಗಳಲ್ಲಿ ಮುಂಗಾರು ಕೊರತೆ

ಮಳೆಯ ಅಭಾವದಿಂದ ಕಂಗೆಟ್ಟ ಕರ್ನಾಟಕ – ದೇಶದಾದ್ಯಂತ 200 ಜಿಲ್ಲೆಗಳಲ್ಲಿ ಮುಂಗಾರು ಕೊರತೆ

ವಾಡಿಕೆಯ ಮಳೆ ಸುರಿದಿಲ್ಲ. ನದಿ, ತೊರೆಗಳು ತುಂಬಿಲ್ಲ. ಮಳೆ ಬೇಕಾದ ಕಡೆಯಂತೂ ಬಂದೇ ಇಲ್ಲ. ಬಿತ್ತನೆ ಕಾರ್ಯ, ನಾಟಿ ಕಾರ್ಯಗಳಿಗೆ ಮಳೆಯೂ ಇಲ್ಲ, ನೀರೂ ಇಲ್ಲ. ಮುಂಗಾರಿನಲ್ಲಿಯೇ ಹೀಗಾದೆ ಮುಂದೆ ಕತೆಯೇನು ಎಂಬುದು ರೈತರ ಚಿಂತೆ.

ಇದನ್ನೂ ಓದಿ:ಬೆಂಗಳೂರು ಸೇರಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಮಳೆರಾಯನ ಆರ್ಭಟ

ತಡವಾಗಿ ಪ್ರವೇಶಿಸಿದ ನೈಋತ್ಯ ಮುಂಗಾರು ಆರಂಭದಲ್ಲೇ ಕುಗ್ಗಿ ಹೋಗಿದೆ. ಮಳೆಯ ಅಭಾವಕ್ಕೆ ಎಲ್ ನಿನೋ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ದೇಶದ ಸುಮಾರು 200 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗದಲ್ಲಿ ಭಾರಿ ಮಳೆ ಕೊರತೆಯಾಗಿದ್ದು, ಒಟ್ಟಾರೆ ಶೇಕಡಾ 32 ರಷ್ಟು ಇಳಿಕೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಆಘಾತಕಾರಿ ಮಾಹಿತಿ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ 57 ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ 41 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಶೇ 9 ರಷ್ಟು ಒಣ ಹವಾಮಾನ ವರದಿಯಾಗಿದೆ.

ಅತಿ ಕಡಿಮೆ ಮಳೆಯಾದ ರಾಜ್ಯಗಳ ಪೈಕಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಶೇ 69 ರಷ್ಟು ಮಳೆ ಅಭಾವ ಕಂಡುಬಂದಿದೆ. ಜೈಪುರ ಮತ್ತು ಕೊಲ್ಹಾಪುರ ಭಾಗಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಕೊಯ್ನಾ ಜಲಾಶಯದಿಂದ ಕರ್ನಾಟಕ ಗಡಿಯ ರಾಜಾಪುರ ಬ್ಯಾರೇಜ್‌ವರೆಗಿನ ಕೃಷ್ಣಾ ನದಿ ಪಾತ್ರದಲ್ಲಿ ಕೃಷಿಗಾಗಿ ನೀರು ಪೂರೈಸುವುದನ್ನು ಅಧಿಕಾರಿಗಳು ಸಂಪೂರ್ಣ ನಿಷೇಧಿಸಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳದ ಕಾರಣ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಕೇವಲ ಶೇಕಡಾ 5 ರಷ್ಟು ಮಳೆಯಾಗಿದ್ದು, ಶುಂಠಿ ನಾಟಿ ಮಾಡಿದ್ದ ರೈತರು ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಕುಸಿತದಿಂದಾಗಿ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿದ್ದಾರೆ.

ತುಂಗಭದ್ರಾ ನದಿಯ ನೀರಿನ ಮಟ್ಟ ತಳ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ. ಮತ್ತೊಂದೆಡೆ, ಕಬಿನಿ, ಕಾವೇರಿ ನದಿಗಳಲ್ಲೂ ನೀರಿಲ್ಲ. ಹೇಮಾವತಿ ನದಿಯಲ್ಲೂ ನೀರಿಲ್ಲ. ಅತ್ತ ಕರಾವಳಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾದರೂ ರೈತರಿಗೆ ಸಾಕಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿಕಾರ್ಯದ ಜೊತೆ ಮಳೆಗಾಲದಲ್ಲೂ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಬಂದರೂ ಬರಬಹುದು.

Sulekha

Leave a Reply

Your email address will not be published. Required fields are marked *