8 ದಿನಗಳ ಮುಂಚಿತವಾಗಿಯೇ ಕೇರಳಕ್ಕೆ ಮಾನ್ಸೂನ್ ಎಂಟ್ರಿ- ಕರುನಾಡಿನಲ್ಲೂ ಭಾರಿ ಮಳೆ ಸಾಧ್ಯತೆ

ಈ ಬಾರಿ ಬಹಳ ಬೇಗನೇ ಮುಂಗಾರು ಮಾರುತಗಳು ಎಂಟ್ರಿಯಾಗಿದೆ. ಪ್ರತಿ ವರ್ಷ ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಮಾನ್ಸೂನ್ ಎಂಟ್ರಿ ಆಗುತಿತ್ತು. ಆದ್ರೆ ಈ ಸಲ ಕಳೆದ 16 ವರ್ಷಗಳಲ್ಲೇ ಮುಂಚಿತವಾಗಿ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2009ರಲ್ಲಿ ಮೇ 23ರಂದೇ ಕೇರಳಕ್ಕೆ ಮಾನ್ಸೂನ್ ಎಂಟ್ರಿ ಕೊಟ್ಟಿತ್ತು. ಈ ವರ್ಷ ಮೇ 24ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿದ್ದು, ಕರ್ನಾಟಕದಲ್ಲೂ ಸಹ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಇನ್ನು ಕರ್ನಾಟಕಕ್ಕೆ ಎರಡ್ಮೂರು ದಿನದಲ್ಲಿ ಮುಂಗಾರು ಮಳೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಮೇ 27 ಅಥವಾ ಮೇ 28ರ ವೇಳೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕೇರಳದ ಬಳಿಕ ಜೂನ್ ಮೊದಲ ವಾರದಲ್ಲಿ ಮುಂಗಾರು ಮಾರುತ ರಾಜ್ಯವನ್ನು ಪ್ರವೇಶಿಸುವ ವಾಡಿಕೆ ಇದೆ. ಆದರೆ ಈ ಬಾರಿ 3-4 ದಿನಗಳು ಮುಂಚಿತವಾಗಿ ಮುಂಗಾರು ಆಗಮಿಸುವ ಮುನ್ಸೂಚನೆಯನ್ನು ರಾಜ್ಯ ಹವಮಾನ ಇಲಾಖೆ ನೀಡಿದೆ.
ಈಗಾಗಲೇ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ತಿರುವನಂತಪುರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಳಿಯ ವೇಗ ಗಂಟೆಗೆ 50 ಕಿ.ಮೀ ಇದೆ. ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ಮೇ 24ರಿಂದ 27ಕ್ಕೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.