ಚಾಮುಂಡಿ ಬೆಟ್ಟದಲ್ಲಿ ಕಪಿರಾಯನ ಚೇಷ್ಟೆಗೆ ಭಕ್ತರು ಸುಸ್ತೋ ಸುಸ್ತು! – ಮಹಿಳೆಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ
ಪ್ರವಾಸಿ ತಾಣಗಳಲ್ಲಿ ವಾನರ ಸೈನ್ಯ ಇದ್ದೇ ಇರುತ್ತೆ. ಅವುಗಳು ಪ್ರವಾಸಿಗರಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಕೈಯಲ್ಲಿರುವ ಬ್ಯಾಗ್ ತಿಂಡಿ ತಿನಿಸುಗಳನ್ನು ಎಳೆದುಕೊಂಡು ಹೋಗುತ್ತವೆ. ಅವುಗಳ ಕಣ್ತಪ್ಪಿಸಿ ಹೋಗಲು ಹರಸಾಹಸ ಪಡಬೇಕಾಗುತ್ತದೆ. ಇದೀಗ ಇಲ್ಲೊಂದು ಕಡೆ ಮಹಿಳೆಯೊಬ್ಬಳ ಫೋನ್ ಅನ್ನು ಕೋತಿಯೊಂದು ಕಸಿದುಕೊಂಡು ಹೋಗಿ ಮರವೇರಿ ಕುಳಿತಿದ್ದು, ಫೋನ್‌ಗಾಗಿ ಮಹಿಳೆ ಪರದಾಡುವಂತಾಗಿತ್ತು.
ಈ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ. ಹಾಸನದಿಂದ ಬಂದ ಕುಟುಂಬ ನಾಡದೇವಿಯ ದರುಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು. ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಯಲ್ಲಿದ್ದ ಪರ್ಸ್ ಕಸಿದ ಕೋತಿ ಮರವೇರಿ ಕುಳಿತಿದೆ. ಬಳಿಕ ಪರ್ಸ್ ನಲ್ಲಿದ್ದ ಒಂದೊಂದೇ ವಸ್ತುಗಳನ್ನು ಬಿಸಾಡಿದ ಮಂಗ ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಹೋಗಿ ಮರದ ತುದಿಯಲ್ಲಿ ಕುಳಿತಿದೆ. ಫೋನ್ ಕೊಡದೆ ಆ ಮಹಿಳೆಯನ್ನು ಸತಾಯಿಸಿದೆ.
ಬಳಿಕ ಅಲ್ಲಿದ್ದವರು ಮಂಗನಿಗೆ ಬಾಳೆಹಣ್ಣು ಆಮಿಷವೊಡ್ಡಿದ್ದರೂ ಅದಕ್ಕೆ ಡೋಂಟ್ ಕೇರ್ ಅಂದಿದೆ. ಮೊಬೈಲ್ ಬಿಡದ ಮಂಗ ಸುಮಾರು ಅರ್ಧಗಂಟೆ ಕಾಲ ತನ್ನ ಚೇಷ್ಠೆಯನ್ನ ಮುಂದುವರೆಸಿ ಕೊನೆಗೆ ಬಿಸಾಡಿದೆ. ಮೊಬೈಲ್ ಪಡೆದ ಭಕ್ತರು ನೆಮ್ಮದಿಯಿಂದ ನಾಡದೇವಿಯ ದರುಶನಕ್ಕೆ ತೆರಳಿದರು. ಈ ವಿಡಿಯೋ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗ್ತಿದೆ.