ನಾಯಿ ಮರಿಗೆ ಕೋತಿಯೇ ತಾಯಿ! – ಹೇಗಿದೆ ಗೊತ್ತಾ ಅಪರೂಪದ ವಾತ್ಸಲ್ಯ?

ನಾಯಿ ಮರಿಗೆ ಕೋತಿಯೇ ತಾಯಿ! – ಹೇಗಿದೆ ಗೊತ್ತಾ ಅಪರೂಪದ ವಾತ್ಸಲ್ಯ?

ಮನುಷ್ಯರು ಇಂದಿನ ದಿನಗಳಲ್ಲಿ ಮಾನವೀಯತೆ ಮರೆತು ಬದುಕುತ್ತಿದ್ದಾರೆ. ಅದೆಷ್ಟೋ ಜನರು ಹುಟ್ಟಿದ ಕೆಲವೇ ಹೊತ್ತಲ್ಲಿ ಮಗುವನ್ನು ಬೀದಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ತಮ್ಮನ್ನು ಎದೆ ಎತ್ತರಕ್ಕೆ ಬೆಳೆಸಿದ  ತಂದೆ ತಾಯಿಯನ್ನೇ ವೃದ್ದಾಶ್ರಮ, ಅನಾಥಾಶ್ರಮದಲ್ಲಿ ಬಿಟ್ಟು ಬರುತ್ತಿದ್ದಾರೆ. ಆದರೆ ಕೋತಿಯೊಂದು ನಾಯಿ ಮರಿಯನ್ನು ತನ್ನ ಮಗುವಿನಂತೆಯೇ ಸಲಹುತ್ತಿರುವುದನ್ನು ನೋಡಿದ್ದೀರಾ? ಇಂತಹ ಅಪರೂಪದ  ಘಟನೆಗೆ ತಮಿಳುನಾಡು ಸಾಕ್ಷಿಯಾಗಿದೆ.

ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲದ ಇಂದಿನ ಕಾಲಘಟ್ಟದಲ್ಲಿ ಕೋತಿಯೊಂದು ನಾಯಿ ಮರಿಯನ್ನು ಹೆತ್ತ ಮಗುವಿನಂತೆ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕೋತಿ ಹಾಗೂ ಪುಟ್ಟ ನಾಯಿ ಮರಿಯ ಒಡನಾಟದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕಾಲಡಿಯಲ್ಲಿ ರಾಶಿ ರಾಶಿ ಮೊಸಳೆಗಳು – ಏಣಿ ಏರಿ ನಿಂತವನ ಕಥೆ ಏನಾಯ್ತು..!?

ತಮಿಳುನಾಡಿನ ಈರೋಡ್‌ ಎಂಬಲ್ಲಿ ನಾಯಿ ಮರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದವು. ಈ ವೇಳೆ ಕೋತಿಯು ಬೀದಿ ನಾಯಿಗಳಿಂದ ನಾಯಿ ಮರಿಯನ್ನು ರಕ್ಷಿಸಿದೆ. ಅದಾದ ನಂತರ ಕೋತಿಯು ನಾಯಿ ಮರಿಯನ್ನು ಅಲ್ಲಿಂದ ಹೊತ್ತೊಯ್ದು ಮಗುವಿನಂತೆ ನಾಯಿ ಮರಿಯನ್ನು ಪೋಷಿಸುತ್ತಾ ಬಂದಿದೆಯಂತೆ. ಸ್ಥಳೀಯರು ಹಾಗೂ ಪ್ರವಾಸಿಗರು ಈ ನಾಯಿ ಹಾಗೂ ಕೋತಿಯ ಒಡನಾಟ ನೋಡಿ ಅಚ್ಚರಿಪಟ್ಟಿದ್ದಾರೆ. ತಾಯಿ ಮಗುವಿನಂತೆ ಈ ಕೋತಿ ಹಾಗೂ ನಾಯಿ ಮರಿ ಒಡನಾಟವಿದ್ದು, ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಈ ಶ್ವಾನ ಹಾಗೂ ವಾನರನ ಅಪರೂಪದ ಸ್ನೇಹ ನೋಡಿದ ಸ್ಥಳೀಯರು ಕೂಡ ಇವುಗಳಿಗೆ ಆಗಾಗ ಆಹಾರ ನೀಡಿ ಸಲಹುತ್ತಿರುತ್ತಾರೆ.  ಅಲ್ಲದೇ ಯಾರಾದರೂ ಆಹಾರ ನೀಡಿದರೆ ಈ ಕೋತಿ ಮೊದಲು ಶ್ವಾನಕ್ಕೆ ನೀಡಿ ನಂತರ ತಾನು ತಿನ್ನಲು ಶುರು ಮಾಡುತ್ತದೆ. ಕಾಡಿನ ಪ್ರಾಣಿಯೊಂದರ ಈ ತಾಯಿ ಪ್ರೀತಿ ಮನುಷ್ಯರಿಗೆ ಪಾಠ ಹೇಳುವಂತಿದೆ.

ಈ ಬಾಂಧವ್ಯದ ಬಗ್ಗೆ ಸ್ಥಳೀಯರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಕೋತಿ ಆ ಪುಟ್ಟ ನಾಯಿ ಮರಿಯನ್ನು ದತ್ತು ಪಡೆಯಲು ನಿರ್ಧರಿಸಿದಂತಿದ್ದು, ಅದನ್ನು ಎತ್ತಿಕೊಂಡು ಓಡಾಡುತ್ತಾ ಸದಾ ರಕ್ಷಣೆ ಮಾಡುತ್ತಿದೆ. ಇವೆರಡು ಇಲ್ಲಿನ ಬೀದಿಗಳಲ್ಲಿ ಜೊತೆಯಾಗಿ ಸುತ್ತಾಡುವುದು ಸಾಮಾನ್ಯವಾಗಿದೆ. ಕೋತಿ ನಾಯಿಮರಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಇಲ್ಲಿನ ಜನಸಂದಣಿಯ ಬೀದಿಗಳಲ್ಲಿ ಸಾಗುತ್ತದೆ. ಅಲ್ಲದೇ ಇವೆರಡು ಜೊತೆಯಾಗಿ ಆಟವಾಡುತ್ತಿರುತ್ತವೆ.  ಇಷ್ಟೇ ಅಲ್ಲದೇ ಬೀದಿನಾಯಿಗಳು ಈ ಪುಟ್ಟ ನಾಯಿ ಮರಿಯ ಮೇಲೆ ದಾಳಿ ಮಾಡಲು ಮುಂದಾದಾಗ ಕೂಡಲೇ ಎಲ್ಲಿದ್ದರೂ ಓಡಿ ಬರುವ ಕೋತಿ ಬೀದಿನಾಯಿಗಳನ್ನು ಓಡಿಸಿ ಮರಿ ನಾಯಿಯನ್ನು ರಕ್ಷಿಸುತ್ತದೆ’ ಎಂದು ಹೇಳಿದ್ದಾರೆ. ಆದರೆ ಈಗ ಅಲ್ಲಿನ ಸ್ಥಳೀಯ ಪ್ರಾಣಿದಯಾ ಸಂಘವೊಂದು ಈ ನಾಯಿ ಮರಿಯನ್ನು ತನ್ನ ಸುಪರ್ದಿಗೆ ಪಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

suddiyaana