ಪ್ರಿಯಾಂಕ ಗಾಂಧಿಗೆ ಕಾನೂನು ಸಂಕಷ್ಟ – ಅಕ್ರಮ ಹಣ ವರ್ಗಾವಣೆ ಆರೋಪ ಪಟ್ಟಿಯಲ್ಲಿ ಪ್ರಿಯಾಂಕ ಹೆಸರು
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ(ಇಡಿ) ಇದೇ ಮೊದಲ ಬಾರಿ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಉಲ್ಲೇಖಿಸಿದೆ ಎಂದು ವರದಿಯಾಗಿದೆ.
ದೆಹಲಿ ಮೂಲದ ರಿಯಲ್ ಎಸ್ಟೇಟ್ ಎಜೆಂಟ್ ಹೆಚ್‌ಎಲ್ ಪಹ್ವಾ ಅವರಿಂದ 2006 ರಲ್ಲಿ ಭೂಮಿ ಖರೀದಿಸಿ, ಫೆಬ್ರವರಿ 2010 ರಲ್ಲಿ ಅದೇ ಭೂಮಿಯನ್ನು ಅವರಿಗೆ ಮಾರಾಟ ಮಾಡುವಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪ್ರಿಯಾಂಕ ಗಾಂಧಿ ಅವರ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಆದ್ರೆ ಈ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ.
ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ – ಇಂಧನದ ಬೆಲೆ ಏರಿಕೆಯಾಗುವ ಆತಂಕ
ಇಡಿ ಪ್ರಕಾರ, ಫರಿದಾಬಾದ್‌ನ ಅಮಿಪುರ್ ಗ್ರಾಮದಲ್ಲಿ ಪಹ್ವಾ ಅವರಿಂದ ಭೂಮಿಯನ್ನು ಖರೀದಿಸಲಾಗಿದೆ. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರಿಂದ ಅಮಿಪುರ್ ಗ್ರಾಮದಲ್ಲಿ 40.08 ಎಕರೆಯ ಮೂರು ತುಂಡು ಭೂಮಿಯನ್ನು ಖರೀದಿಸಿ ಅದನ್ನು ಡಿಸೆಂಬರ್, 2010 ರಲ್ಲಿ ಅವರಿಗೇ ಮಾರಾಟ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಪಹ್ವಾ ಅವರು ಎನ್‌ಆರ್‌ಐ ಉದ್ಯಮಿ ಸಿಸಿ ಥಂಪಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ.
ಈ ದೊಡ್ಡ ಪ್ರಕರಣವು ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಒಳಗೊಂಡಿದ್ದು, ಮನಿ ಲಾಂಡರಿಂಗ್, ವಿದೇಶಿ ವಿನಿಮಯ ಮತ್ತು ಕಪ್ಪು ಹಣದ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ರಹಸ್ಯ ಕಾಯಿದೆ ಅಡಿ ತನಿಖೆ ನಡೆಯುತ್ತಿದೆ.
ಸಂಜಯ್ ಭಂಡಾರಿ 2016 ರಲ್ಲಿ ಭಾರತದಿಂದ ಯುಕೆಗೆ ಪಲಾಯನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ಹಿಂದಿನ ಆರೋಪಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಅವರನ್ನು ಥಂಪಿಯ ಆಪ್ತ ಸಹಾಯಕ ಎಂದು ಹೆಸರಿಸಿದೆ.
ಹೊಸ ಆರೋಪಪಟ್ಟಿಯಲ್ಲಿ, ಪಹ್ವಾ ಅವರು ಭೂ ಸ್ವಾಧೀನದ ಉದ್ದೇಶಕ್ಕಾಗಿ ಹಣವನ್ನು ಪಡೆಯುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. “ರಾಬರ್ಟ್ ವಾದ್ರಾ ಅವರು ಪಹ್ವಾಗೆ ಸಂಪೂರ್ಣ ಮಾರಾಟದ ಹಣವನ್ನು ಪಾವತಿಸದಿರುವುದು ಗಮನಕ್ಕೆ ಬಂದಿದೆ” ಎಂದು ಇಡಿ ಹೇಳಿದೆ.