7 ವಿಕೆಟ್ ಕಬಳಿಸಿ ಸೆಮೀಸ್ ಗೆದ್ದ ಮೊಹಮ್ಮದ್ ಶಮಿ – ವಿಶ್ವಕಪ್‌ನಲ್ಲಿ ಶೈನ್ ಆಗಿರುವ ಶಮಿ ಬದುಕಿನ ಹಿಂದಿದೆ ಕರಾಳ ಕಥೆ

7 ವಿಕೆಟ್ ಕಬಳಿಸಿ ಸೆಮೀಸ್ ಗೆದ್ದ ಮೊಹಮ್ಮದ್ ಶಮಿ – ವಿಶ್ವಕಪ್‌ನಲ್ಲಿ ಶೈನ್ ಆಗಿರುವ ಶಮಿ ಬದುಕಿನ ಹಿಂದಿದೆ ಕರಾಳ ಕಥೆ

ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಗೆಲುವಿನ ರೂವಾರಿ. ಶಮಿ ವೆರಿ ಸ್ಪೆಷಲ್ ಬೌಲರ್ ಕೂಡಾ ಹೌದು. ಭಾರತ ತಂಡವು ಸೆಮೀಸ್ ಗೆದ್ದು ಫೈನಲ್‌ಗೇರಲು ಮೊಹಮ್ಮದ್ ಶಮಿಯವರದ್ದು ಪ್ರಮುಖ ಪಾತ್ರವಿದೆ. ಇದೊಂದು ಶಮಿ ಫೈನಲ್‌ ಎಂದೇ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಬೌಲಿಂಗ್ ದಾಳಿ ನಡೆಸಿ 7 ವಿಕೆಟ್ ಕಬಳಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ ಕೆಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿಯಿಂದ ಮಾನಸಿಕ ಹಿಂಸೆ, ಆತ್ಮಹತ್ಯೆ ಯೋಚನೆ – ಎಲ್ಲವನ್ನೂ ಮೆಟ್ಟಿನಿಂತ ಮೊಹಮ್ಮದ್ ಶಮಿಯಿಂದ ವಿಶ್ವಕಪ್‌ನಲ್ಲಿ ಸಾಧನೆ

ಮುಂಬೈನ ವಾಂಖೆಡೆಯ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಮೊಹಮ್ಮದ್ ಶಮಿ ತಮ್ಮ ಬೌಲಿಂಗ್ ಜಾದೂ ಪ್ರದರ್ಶಿಸಿದ್ದಾರೆ. ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ನ್ಯೂಜಿಲೆಂಡ್ ಬ್ಯಾಟರ್ ಗಳಿಗೆ ಲಗಾಮು ಹಾಕಿದ ಯಶಸ್ಸು ಶಮಿಗೆ ಸಲ್ಲುತ್ತದೆ.  ಸೆಮೀಸ್‌ನಲ್ಲಿ 7 ವಿಕೆಟ್ ಪಡೆದ ಶಮಿ ಕಿವೀಸ್ ಪಾಲಿಗೆ ಏಳರ ಶಮಿ (ಶನಿ)ಯಾಗಿ ಕಾಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 50 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶಮಿ 32.2 ಓವರ್‌ನಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಈ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ಕೇವಲ 17 ಇನ್ನಿಂಗ್ಸ್‌ಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಆಸ್ಟ್ರೇಲಿಯಾದ ಮೆಚೆಲ್ ಸ್ಟಾರ್ಕ್ 19 ಇನ್ನಿಂಗ್ಸ್ಗಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅದಕ್ಕಿಂತಲೂ ಮುಖ್ಯವಾಗಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 18 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲ, ಭಾರತದ ವೇಗಿ ಮೊಹಮ್ಮದ್ ಶಮಿ ಲೆಜೆಂಡರಿ ಆಸ್ಟ್ರೇಲಿಯಾ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ದಾಖಲೆಯನ್ನು ಸರಿಗಟ್ಟಿದ್ದಾರೆ ಗ್ಲೆನ್ ಮೆಕ್‌ಗ್ರಾತ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ. ಐಸಿಸಿ ವಿಶ್ವಕಪ್ 2003 ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್ಸ್ಟ್ರೂಮ್ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಸರಿಗಟ್ಟಿದ್ದಾರೆ.

ಜೀವನದಲ್ಲಿ ಏಳುಬೀಳುಗಳ ನಡುವೆ ವಿಶ್ವಕಪ್‌ನಲ್ಲಿ ಶೈನ್ ಆದ ಶಮಿ

ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬೆನ್ನೆಲುಬು ಆಗಿದ್ದಾರೆ. ಆದರೆ, ಕಳೆದ ಹಲವು ವರ್ಷಗಳಿಂದ ಶಮಿಯನ್ನ ಅಂಡರ್ಎಸ್ಟಿಮೇಟ್ ಮಾಡಲಾಗಿತ್ತು. ವಿಶ್ವಕಪ್ ವಿಚಾರದಲ್ಲೂ ಅಷ್ಟೇ. ಹಾರ್ದಿಕ್ ಪಾಂಡ್ಯಾಗೆ ಇಂಜುರಿಯಾಗಿದ್ರಿಂದ ಶಮಿಗೆ ನ್ಯೂಜಿಲ್ಯಾಂಡ್ ವಿರುದ್ಧ ಆಡಲು ಅವಕಾಶ ಸಿಕ್ಕಿತ್ತು. ಇಲ್ಲಾಂದ್ರೆ ಶಮಿ ವಿಶ್ವಕಪ್ ಆಡುವುದು ಡೌಟ್ ಆಗಿತ್ತು. ಶಮಿ ವಿಚಾರದಲ್ಲಿ ಹಲವು ವರ್ಷಗಳಿಂದ ಇದೇ ರೀತಿಯಾಗ್ತಿದೆ. ಪ್ರತಿಬಾರಿಯೂ ಶಮಿಗೆ ಹೀಗೆ ಆಗಿದೆ. ಕೊನೆಗೂ ಈಗ ಸರಿಯಾದ ಟೈಮಿಗೆ ಶಮಿ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಶಮಿ ತುಂಬಾ ಅಟ್ಯಾಕಿಂಗ್ ಬೌಲರ್. ಡಿಫರೆಂಟ್ ಆ್ಯಂಗಲ್ನಲ್ಲಿ ಬೌಲ್ ಮಾಡುತ್ತಾರೆ. ಸದ್ಯ ಟೀಂ ಇಂಡಿಯಾದ ಅತ್ಯಂತ ಪರ್ಫೆಕ್ಟ್ ಆಗಿ ಬೌನ್ಸರ್ ಎಸೆಯುವ ಬೌಲರ್ ಅಂದ್ರೆ ಅದು ಮೊಹಮ್ಮದ್ ಶಮಿ. ಶಮಿಯ ಬೌಲಿಂಗ್ ಸ್ಟೈಲ್ ಕೂಡ ಸರಳ ಮತ್ತು ಇಂಪ್ರೆಸಿವ್ ಆಗಿದೆ.

3 ಬಾರಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡಿದ್ದ ಶಮಿ!

ಮೊಹಮ್ಮದ್ ಶಮಿಯ ಈ ಸಕ್ಸಸ್ ಸ್ಟೋರಿ ಹಿಂದೆ ಒಂದು ಕರಾಳ ಕಥೆ ಕೂಡ ಇದೆ. ಇಂದು ಶಮಿ ಮೆಂಟಲಿ ತುಂಬಾ ಸ್ಟ್ರಾಂಗ್ ಪರ್ಸನ್ ಆಗಿದ್ದಾರೆ. ಅದಕ್ಕೆ ಕಾರಣ ಶಮಿಯ ಖಾಸಗಿ ಜೀವನಲ್ಲಾಗಿರುವಂಥಾ ಒಂದಷ್ಟು ಬೆಳವಣಿಗೆಗಳು. ಶಮಿಯ ಪರ್ಸನಲ್ ಲೈಫ್ ಒಂದು ದೊಡ್ಡ ಟ್ರ್ಯಾಜಿಡಿ. ಶಮಿ ವಿರುದ್ಧ ಪತ್ನಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ರು. ದೌರ್ಜನ್ಯ, ಕಿರುಕುಳ ಸೇರಿದಂತೆ ಶಮಿ ವಿರುದ್ಧ ಗಂಭೀರ ಕೇಸ್ಗಳನ್ನ ಹಾಕಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಎಲ್ಲಾ ಆರೋಪಗಳಿಂದಾಗಿ ಒಂದು ಹಂತದಲ್ಲಿ ಬಿಸಿಸಿಐ ಕೂಡ ಶಮಿಯ ಕಾಂಟ್ರ್ಯಾಕ್ಟ್ನ್ನ ತಡೆ ಹಿಡಿದಿತ್ತು. ಬಳಿಕ ಶಮಿ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಕೂಡ ತನಿಖೆ ನಡೆಸಿದ್ದು ನಂತ್ರ ಕ್ಲೀನ್ಚಿಟ್ ಕೊಟ್ಟಿದ್ದು. ಟೀಂ ಇಂಡಿಯಾ ವೇಗಿಯ ಬೆನ್ನಿಗೆ ಬಿಸಿಸಿಐ ನಿಂತುಕೊಂಡಿತ್ತು. ಆದ್ರೆ ಸಂಕಷ್ಟದ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ರಂತೆ. 2020ರಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಶಮಿ ಜೊತೆಗೆ ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ವಿಡಿಯೋ ಚಾಟ್ ಮಾಡ್ತಾರೆ. ಈ ವೇಳೆ ರೋಹಿತ್ ಶರ್ಮಾ ಶಮಿಯ ಸಂಕಷ್ಟದ ದಿನಗಳ ಬಗ್ಗೆ ಒಂದಷ್ಟು ಕ್ವಶ್ಚನ್ಸ್ ಕೆಳ್ತಾರೆ. ಆಗ ಶಮಿ ತಾನು ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿರೋದಾಗಿ ಮೊದಲ ಬಾರಿಗೆ ಬಹಿರಂಗಪಡಿಸ್ತಾರೆ. ಆಗ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಮತ್ತು ಎಲ್ಲಾ ಪ್ಲೇಯರ್ಸ್ಗಳು, ಬಿಸಿಸಿಐ ಕಂಪ್ಲೀಟ್ ಸಪೋರ್ಟ್ ಮಾಡಿದ್ರಿಂದ ತನ್ನ ಆತ್ಮಹತ್ಯೆ ಯೋಚನೆಯಿಂದ ಹೊರ ಬರಲು ಸಾಧ್ಯವಾಯ್ತು ಅಂತಾ ಶಮಿ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳ ಶಮಿ ಮೆಂಟಲಿ ತುಂಬಾ ಸ್ಟ್ರ್ಯಾಂಗ್ ಆಗಿದ್ದಾರೆ. ಇಂದು ಶಮಿ ವಿಶ್ವದ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಶಮಿಯ ಈ ಸಾಧನೆ ಹಿಂದೆ ನೋವಿನ ಕಥೆ ಇದೆ ಅನ್ನೋದೇ ಅಭಿಮಾನಿಗಳಿಗೂ ಬೇಸರ ತಂದಿದೆ. ಅದೇನೇ ಇರಲಿ, ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಭಾರತ ಫೈನಲ್ಗೇರಲು ಪ್ರಮುಖ ಕಾರಣರಾಗಿರುವ ಶಮಿ ಇನ್ನಷ್ಟೂ ಟೀಮ್ ಇಂಡಿಯಾದಲ್ಲಿ ಸಾಧನೆ ಮಾಡಲಿ, ದಾಖಲೆ ಮೇಲೆ ದಾಖಲೆ ಬರೆಯಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

Sulekha