ಬಾರ್ಡರ್ ಗವಾಸ್ಕರ್ ಟ್ರೋಫಿಗಿಲ್ಲ ಶಮಿ? – ಕಮ್ ಬ್ಯಾಕ್ ಸಿದ್ಧವಿದ್ರೂ ಸಾಧ್ಯವಿಲ್ವಾ?
ಮೈದಾನಕ್ಕಿಳಿಯಲು ಇನ್ನೆಷ್ಟು ದಿನ ಬೇಕು?
ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಯಾವ್ದೇ ಮ್ಯಾಚ್ ಅನೌನ್ಸ್ ಆದ್ರೂ ಅಭಿಮಾನಿಗಳನ್ನ ಕಾಡೋ ಪ್ರಶ್ನೆ ಒಂದೇ. ಬೌಲಿಂಗ್ ಬ್ರಹ್ಮಾಸ್ತ್ರ ಮೊಹಮ್ಮದ್ ಶಮಿ ಕಮ್ ಬ್ಯಾಕ್ ಯಾವಾಗ ಅನ್ನೋದು. ಈ ಪಂದ್ಯಕ್ಕೆ ಬರ್ತಾರೆ, ನೆಕ್ಟ್ಸ್ ಕ್ಯಾಚ್ನಲ್ಲಿ ಇರ್ತಾರೆ ಅಂತಾ ಕಾದಿದ್ದೇ ಬಂತು. ಬಟ್ ಶಮಿ ಅಡ್ರೆಸ್ಸೇ ಇಲ್ಲ. ಭಾರತದ ಪರ ಪಂದ್ಯಗಳನ್ನಾಡಿ ವರ್ಷವೇ ಕಳೆದಿದೆ. ಐಪಿಎಲ್ನಲ್ಲೂ ಶಮಿ ಮೈದಾನಕ್ಕೆ ಇಳಿದಿರಲಿಲ್ಲ. ಈಗ ಇರೋ ಲೇಟೆಸ್ಟ್ ಕನ್ಫ್ಯೂಷನ್ ಅಂದ್ರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾದ್ರೂ ಆಡ್ತಾರಾ ಅನ್ನೋದು. ಈ ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತದ ಪಾಲಿಗೆ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಇದೇ ಕಾರಣಕ್ಕೆ ಈ ಸಿರೀಸ್ಗಾದ್ರೂ ಶಮಿ ತಂಡಕ್ಕೆ ಮರಳಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಮಾತನಾಡಿದ್ದಾರೆ. ಅಷ್ಟಕ್ಕೂ ರೋಹಿತ್ ಹೇಳಿದ್ದೇನು? ಶಮಿ ಕಮ್ಬ್ಯಾಕ್ ಸದ್ಯಕ್ಕಿಲ್ವಾ? ಇಂಜುರಿ ಸಮಸ್ಯೆ ಕ್ಲಿಯರ್ ಆಗಿಲ್ವಾ? ಈ ಬಗೆಗಿನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದಿಂದ ಶಾಕ್ – 3.63 ಲಕ್ಷ ಕಾರ್ಡ್ ರದ್ದು ಮಾಡಿದ ರಾಜ್ಯ ಸರ್ಕಾರ!
2025ರಲ್ಲಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಇರೋದ್ರಿಂದ ಭಾರತಕ್ಕೆ ಫೈನಲ್ ಪಂದ್ಯ ಆಡಲು ಈ ಬಾರ್ಡರ್ ಗವಾಸ್ಕರ್ ಟ್ರೋಫಿ ತುಂಬಾನೇ ಮುಖ್ಯ. ಇದೇ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ಈ ಸಿರೀಸ್ನಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಆಡುವುದು ತಂಡಕ್ಕೆ ಇಂಪಾರ್ಟೆಂಟ್. ಆದರೆ ಒಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರು ಉಳಿದಿರೋ ಶಮಿ ಅಷ್ಟ್ರಲ್ಲಿ ಗುಣಮುಖರಾಗ್ತಾರಾ, ತಂಡವನ್ನು ಸೇರಿಕೊಳ್ಳುತ್ತಾರಾ ಇಲ್ಲವಾ ಎಂಬ ಗೊಂದಲ ಹಾಗೇ ಇದೆ. ಇದ್ರ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿರುವ ಮಾತು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ.
ಶಮಿ ಪೂರ್ತಿ ಫಿಟ್ ಆಗದಿದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕಿಲ್ಲ!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೋಹಿತ್ ಶರ್ಮಾ ಶಮಿ ಕಮ್ಬ್ಯಾಕ್ ಬಗ್ಗೆ ಮಾತನಾಡಿದ್ರು. ಪ್ರಸ್ತುತ ಶಮಿ ಅವರು ಎನ್ ಸಿಎನಲ್ಲಿ ಫಿಸಿಯೋಗಳ ಜೊತೆಗಿದ್ದಾರೆ. ಅವರು ಫಿಟ್ ಆಗಿ ತಂಡಕ್ಕೆ ಮರಳಲಿ ಎಂದು ನಾವು ಆಶಿಸುತ್ತೇವೆ. ಅವರು ಶೇ.100ರಷ್ಟು ಫಿಟ್ ಆಗುವುದನ್ನು ನಾವು ಬಯಸುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಅರ್ಧಂಬರ್ಧ ಗುಣಮುಖರಾದ ಶಮಿಯನ್ನು ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಲು ನಾವು ಇಚ್ಛಿಸುವುದಿಲ್ಲ. ತುಂಬಾ ಪಂದ್ಯಗಳಿಂದ ಹೊರಗುಳಿಯುವುದು ವೇಗದ ಬೌಲರ್ ಗೆ ಬಹಳ ಕಷ್ಚ. ಹೀಗಾಗಿ ಅವಸರವಸರವಾಗಿ ತಂಡಕ್ಕೆ ಹಿಂದುರುಗಿ ಉತ್ತಮ ಪ್ರದರ್ಶನ ನೀಡು ಎಂದು ಹೇಳಲು ಆಗೋದಿಲ್ಲ. ಶೇಕಡಾ 100ರಷ್ಟು ಫಿಟ್ ಆಗಲು ನಾವು ಅವರಿಗೆ ಮತ್ತಷ್ಟು ಸಮಯ ಕೊಡಬೇಕು ಎಂದಿದ್ದಾರೆ. ಅಲ್ಲಿಗೆ ಶಮಿ ವಾಪಸ್ಸಾತಿ ಬಗ್ಗೆ ರೋಹಿತ್ ಕೂಡ ಕ್ಲಾರಿಟಿ ಕೊಟ್ಟಿಲ್ಲ.
2023ರ ಏಕದಿನ ವಿಶ್ವಕಪ್ ಬಳಿಕ ಮೈದಾನಕ್ಕಿಳಿಯದ ಶಮಿ!
ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಹಲವು ತಿಂಗಳುಗಳಿಂದ ಕ್ರಿಕೆಟ್ ಮೈದಾನದಿಂದ ದೂರರವೇ ಇದ್ದಾರೆ. 2023ರ ಏಕದಿನ ವಿಶ್ವಕಪ್ ನಂತರ ಸ್ಟಾರ್ ಬೌಲರ್ ಟೀಮ್ ಇಂಡಿಯಾ ಪರ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ 2024ರ ಬಾರ್ಡರ್ -ಗವಾಸ್ಕರ್ ಸರಣಿಯಿಂದ ಅವರನ್ನು ಹೊರಗಿಡಲಾಗುತ್ತೆ ಎನ್ನಲಾಗ್ತಿದೆ. ಈ ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ. ಉಭಯ ತಂಡಗಳ ನಡುವಿನ ಈ ಸರಣಿಯು ನವೆಂಬರ್ 26 ರಿಂದ ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಉಭಯ ತಂಡಗಳಿಗೂ ಕೂಡ ತುಂಬಾನೇ ಮಹತ್ವ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಯಾವೆಲ್ಲಾ ತಂಡಗಳು ಫೈನಲ್ಗೆ ಪ್ರವೇಶ ಪಡೆಯಲಿವೆ ಎಂಬ ಬಗ್ಗೆ ಈ ಸರಣಿಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಟೀಮ್ ಇಂಡಿಯಾ ಸದ್ಯ ಲಿಸ್ಟ್ನ ಟಾಪರ್ ಆಗಿದೆ.
ಭರ್ಜರಿ ಅಭ್ಯಾಸದ ಮೂಲಕ ಶಮಿ ಕಮ್ ಬ್ಯಾಕ್ ಹಿಂಟ್!
ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿ ಕ್ರಿಕೆಟ್ನಿಂದ ಹೊರಗುಳಿದು ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ಶಮಿ ಟೀಮ್ ಇಂಡಿಯಾ ಪರ ಕಮ್ಬ್ಯಾಕ್ ಮಾಡಲು ರೆಡಿ ಎಂದಿದ್ದಾರೆ. ಆದರೆ ಅವರ ಮೊಣಕಾಲಿನ ಗಾಯ ಮತ್ತೆ ಉಲ್ಬಣಗೊಂಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ಆರಂಭಿಸಿದೆ. ಮೊಣಕಾಲಿನಲ್ಲಿ ಹೆಚ್ಚುತ್ತಿರುವ ಊತದಿಂದಾಗಿ ಶಮಿ ಚೇತರಿಸಿಕೊಳ್ಳಲು 6 ರಿಂದ 8 ವಾರಗಳು ಬೇಕಾಗಬಹುದು ಎಂದು ವರದಿಗಳು ಹೇಳಿವೆ. ಇಂತಹ ಪರಿಸ್ಥಿತಿಯಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಶಮಿ ಟೀಮ್ ಇಂಡಿಯಾ ಪರ ಕಮ್ಬ್ಯಾಕ್ ಮಾಡುವುದು ಡೌಟ್ ಇದೆ. ಇನ್ನು ಶಮಿ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರು. ನಾನು ಬಾರ್ಡರ್ – ಗವಾಸ್ಕರ್ ಟ್ರೋಫಿಗೆ ಅಲಭ್ಯ ಎಂದು ಬಿಸಿಸಿಐ ಆಗಲಿ ಅಥವಾ ನಾನಾಗಲಿ ಈವೆರೆಗೂ ತಿಳಿಸಿಲ್ಲ. ಹೀಗಾಗಿ ಇಂತಹ ಅನಧಿಕೃತ ಮೂಲಗಳ ಸುದ್ದಿಗೆ ಜನ ಗಮನ ಕೊಡಬಾರದು ಎಂದು ವಿನಂತಿಸುತ್ತೇನೆ. ನಾನು ಏನನ್ನೂ ಹೇಳದೇ ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದನ್ನು ದಯವಿಟ್ಟು ಇನ್ನಾದರೂ ನಿಲ್ಲಿಸಿ ಎಂದು ಮನವಿ ಮಾಡಿದ್ರು.
ಒಟ್ನಲ್ಲಿ ಮೈದಾನದಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಜಾದೂ ನೋಡೋಕೆ ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆಗೆ ಚೇತರಿಸಿಕೊಂಡು ಟೀಂ ಇಂಡಿಯಾ ಪರ ಕಣಕ್ಕಿಳಿಯಲಿ ಅನ್ನೋದೇ ಅಭಿಮಾನಿಗಳ ಆಶಯ.