18 ರನ್ ನೀಡಿ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ – ಲಂಕಾ ವಿಕೆಟ್ ದಹನ ಮಾಡಲು ಶಮಿಗೆ ಸಿರಾಜ್ ಸಾಥ್

18 ರನ್ ನೀಡಿ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ – ಲಂಕಾ ವಿಕೆಟ್ ದಹನ ಮಾಡಲು ಶಮಿಗೆ ಸಿರಾಜ್ ಸಾಥ್

ಈ ಬಾರಿಯ ವಿಶ್ವಕಪ್‌ನಲ್ಲಿ 2 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದ ಮೊದಲ ವೇಗಿ ಎನಿಸಿಕೊಂಡಿದ್ದಾರೆ ಮೊಹಮ್ಮದ್ ಶಮಿ. ಮೊಹಮ್ಮದ್ ಶಮಿಯ ಮಾರಕ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಶ್ರೀಲಂಕಾ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 5 ಓವರ್‌ಗಳಲ್ಲಿ 18 ರನ್ ನೀಡಿ ಶಮಿ 5 ವಿಕೆಟ್ ಕಬಳಿಸಿದರು. ಈ ಐದು ವಿಕೆಟ್‌ಗಳೊಂದಿಗೆ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನಲ್ಲಿ ಗಿಲ್ – ಕೊಹ್ಲಿ ಜೊತೆಯಾಟ ಕಣ್ತುಂಬಿಕೊಂಡ ಫ್ಯಾನ್ಸ್ – ಲಂಕಾ ವಿರುದ್ಧ ಅಬ್ಬರಿಸಿದ ಸ್ಟಾರ್ ಆಟಗಾರರು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಲಂಕಾ ಆಟಗಾರರು ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಆರಂಭದಲ್ಲಿಯೇ ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿದರು. ಇದಾದ ಬಳಿಕ ಲಂಕನ್ನರ ವಿಕೆಟ್ ದಹನ ಮಾಡಿದ್ದು ಮೊಹಮ್ಮದ್ ಶಮಿ. ಕರಾರುವಾಕ್ ಬೌಲಿಂಗ್ ಮೂಲಕ ಶಮಿ ಸಂಚಲನ ಸೃಷ್ಟಿಸಿದರು. ಕೇವಲ 5 ಓವರ್‌ಗಳಲ್ಲಿ 18 ರನ್ ನೀಡಿದ ಶಮಿ 5 ವಿಕೆಟ್ ಕಬಳಿಸಿದರು. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಮೊಹಮ್ಮದ್ ಶಮಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಝಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ಹೆಸರಿನಲ್ಲಿತ್ತು. ಶ್ರೀನಾಥ್ ಹಾಗೂ ಝಹೀರ್ ಖಾನ್ ತಲಾ 44 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 45 ವಿಕೆಟ್ ಉರುಳಿಸುವ ಮೂಲಕ ಟೀಮ್ ಇಂಡಿಯಾ ಪರ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಮೊಹಮ್ಮದ್ ಶಮಿ ತಮ್ಮದಾಗಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಾವಗಲ್ ಶ್ರೀನಾಥ್ ಹಾಗೂ ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಈ ಇಬ್ಬರು ಬೌಲರ್‌ಗಳು ತಲಾ 3 ಬಾರಿ 5 ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 4ನೇ ಬಾರಿಗೆ 5 ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಶಮಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ಭಾರತೀಯ ಬೌಲರ್ ಹಾಗೂ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಶಮಿಗೂ ಮುನ್ನ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಏಕದಿನ ವಿಶ್ವಕಪ್ನಲ್ಲಿ 3 ಬಾರಿ 5 ವಿಕೆಟ್ ಕಬಳಿಸಿದ್ದರು. ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ವೇಗಿ ಸರಿಗಟ್ಟಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಕೇವಲ 3 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಮಿ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಶಮಿ ನ್ಯೂಝಿಲೆಂಡ್ ವಿರುದ್ಧ 5 ಹಾಗೂ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಪಡೆದಿದ್ದರು. ಇದೀಗ ಶ್ರೀಲಂಕಾ ವಿರುದ್ಧ ಮತ್ತೆ 5 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಅತೀ ಕಡಿಮೆ ಪಂದ್ಯಗಳಿಂದ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಶಮಿ ಹೆಸರಿಗೆ ಸೇರ್ಪಡೆಯಾಗಿದೆ. ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ಬಾರಿ 4+ ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ಮೊಹಮ್ಮದ್ ಶಮಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿರುವ ಮೊಹಮ್ಮದ್ ಶಮಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿದಿದೆ. ಇದರೊಂದಿಗೆ ಈ ಬಾರಿಯ ವಿಶ್ವಕಪ್ನಲ್ಲಿ 2 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

ಇನ್ನು ಮೊಹಮ್ಮದ್ ಸಿರಾಜ್ ಬೌಲಿಂಗ್ ಬಗ್ಗೆ ಹೇಳಲೇಬೇಕು. ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್‌ಗೆ ಸಿಂಹಳಿಯರು ನಡುಗಿ ಹೋಗಿದ್ದರು. ಸಿರಾಜ್ ಶ್ರೀಲಂಕಾದ ಆರಂಭಿಕ ಆಟಗಾರ ಸೇರಿದಂತೆ ಒಟ್ಟು ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಒಂದೇ ಒಂದು ರನ್ ನೀಡದೆ ಪೆವಿಲಿಯನ್‌ಗಟ್ಟಿದ್ದರು. ಮೊಹಮ್ಮದ್ ಸಿರಾಜ್ ತಮ್ಮ ಮೊದಲ 7 ಎಸೆತಗಳಲ್ಲಿ ಯಾವುದೇ ರನ್ ನೀಡದೆ ಒಟ್ಟು 3 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ತನ್ನ ಕೊಡುಗೆ ನೀಡಿದರು.

Sulekha