ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ – ಕಾಂಗ್ರೆಸ್ ವಿರುದ್ಧ ಮೋದಿ ರಣಕಹಳೆ

ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ – ಕಾಂಗ್ರೆಸ್ ವಿರುದ್ಧ ಮೋದಿ ರಣಕಹಳೆ

ರಾಜ್ಯದಲ್ಲಿ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಬಿಜೆಪಿ ಈಗಾಗಲೇ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದಕ್ಕೆ ಸರಿಯಾಗಿ ತಿಂಗಳಿಗೆ ಎರಡು ಬಾರಿಯಾದರೂ ನರೇಂದ್ರ ಮೋದಿಯವರ ಕರ್ನಾಟಕ ಪ್ರವಾಸ ಕೂಡಾ ಫಿಕ್ಸ್ ಆಗಿದೆ. ಇವತ್ತು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾರೋಪ ಸಮಾರಂಭದ ವೇದಿಕೆ ಕೂಡಾ ನರೇಂದ್ರಮೋದಿಯವರ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಸಮಾವೇಶದ ವೇದಿಕೆಗೆ ನರೇಂದ್ರ ಮೋದಿ ತೆರೆದ ವಾಹನದಲ್ಲಿ ಆಗಮಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗಿದ್ದರು. ತೆರೆದ ವಾಹನದಲ್ಲಿ ವೇದಿಕೆಗೆ ಆಗಮಿಸುವ ವೇಳೆ ಮೋದಿಗೆ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆಯನ್ನೇ ಸುರಿಸಿದರು.

ಇದನ್ನೂ ಓದಿ:  ವೈಟ್‌ಫೀಲ್ಡ್ -ಕೆಆರ್ ಪುರ ನಡುವಿನ ನೇರಳೆ ಮಾರ್ಗ ಉದ್ಘಾಟನೆ – ಮೋದಿ ಮೆಟ್ರೋ ಯಾನ ಹೇಗಿತ್ತು?

ಭಾರತೀಯ ವಾಯುಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ನಗರದ ಜಿಎಮ್ಐಟಿ (GMIT) ಮೈದಾನದಲ್ಲಿ ಆಯೋಜಿಸಲಾಗಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ನಂತರ ವೇದಿಕೆಯೇರಿದ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್​ ಪಕ್ಷದ ಕರ್ಮಭೂಮಿ ಕಲಬುರಗಿಯಲ್ಲಿ ಬಿಜೆಪಿ ಪಕ್ಷದ ಮೇಯರ್​​​ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸೂಚನೆಯಾಗಿದೆ. ಇದು ಕೇವಲ ಕಲಬುರಗಿಗೆ ಮಾತ್ರ ಸಿಮೀತವಾಗಿಲ್ಲ, ಡಬಲ್​​ ಎಂಜಿನ್​ ಸರ್ಕಾರದ ಕಾರ್ಯ ನೋಡಿದ ಇಡೀ ರಾಜ್ಯದ ಜನರು ಬಿಜೆಪಿ ಗೆಲ್ಲಿಸಲು ಮುಂದಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆಯಲ್ಲೇ ಕಮಲ ಜಯಭೇರಿ ಬಾರಿಸಿದೆ’ ಎಂದು ಹೇಳಿದರು. ‘ನಾನು ಕರ್ನಾಟಕದ ವಿಡಿಯೋ ಒಂದನ್ನು ನೋಡಿದೆ. ಕಾಂಗ್ರೆಸ್ ಮಾಜಿ ಸಿಎಂ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಈ ರೀತಿ ಆದರೆ ಸಾಮಾನ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

 

suddiyaana