ಪರಿಷತ್ ಚುನಾವಣೆಗೆ ಮದ್ಯ ಮಾರಾಟ ನಿರ್ಬಂಧ‌ದಲ್ಲಿ ಮಾರ್ಪಾಡು – ಬೆಂಗಳೂರಲ್ಲಿ 3 ದಿನ ಅಲ್ಲ, 2 ದಿನ ಮಾತ್ರ ಮದ್ಯ ಮಾರಾಟ ಬಂದ್!

ಪರಿಷತ್ ಚುನಾವಣೆಗೆ ಮದ್ಯ ಮಾರಾಟ ನಿರ್ಬಂಧ‌ದಲ್ಲಿ ಮಾರ್ಪಾಡು – ಬೆಂಗಳೂರಲ್ಲಿ 3 ದಿನ ಅಲ್ಲ, 2 ದಿನ ಮಾತ್ರ ಮದ್ಯ ಮಾರಾಟ ಬಂದ್!

ಮದ್ಯಪ್ರಿಯರಿಗೆ ಹೈಕೋರ್ಟ್‌ ಗುಡ್‌ನ್ಯೂಸ್‌ ನೀಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧ‌ದಲ್ಲಿ ಮಾರ್ಪಾಡು ಮಾಡಲಾಗಿದೆ. ಮೂರು ದಿನ ಮದ್ಯ ಮಾರಾಟ ಬಂದ್‌ಗೆ ನಿರ್ಬಂಧ ಹೇರಿದನ್ನು 2 ದಿನಕ್ಕೆ ಮಾತ್ರ ಕೋರ್ಟ್‌ ಸೀಮಿತಗೊಳಿಸಿದೆ.

ಉಪ ಚುನಾವಣೆ ಹಿನ್ನೆಲೆ ಫೆಬ್ರವರಿ 14ರ ಸಂಜೆಯಿಂದ 16ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಪ್ರಕಟಿಸಿತ್ತು. ಇದೀಗ ಹೈಕೋರ್ಟ್‌ ಮತದಾನದ ದಿನ ಮತ್ತು ಎಣಿಕೆ‌‌ ದಿನದಂದು ಮಾತ್ರ ಮದ್ಯ ಮಾರಾಟಕ್ಕೆ ಹೈಕೋರ್ಟ್‌ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದೆ. ಫೆ.16 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮತ್ತು ಫೆ.20 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ‌‌ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ – ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ವರಿಷ್ಠೆ

ಆಹಾರ ಪೂರೈಸಲು ರೆಸ್ಟೋರೆಂಟ್‌ಗಳಿಗೆ ನಿರ್ಬಂಧವಿಲ್ಲ. ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಆದೇಶ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರಕ್ಕೂ ಅನ್ವಯವಾಗುತ್ತದೆ.

10 ಸಾವಿರ ಮಹಿಳೆಯರು ಹಾಗೂ 6,000 ಪುರುಷರು ಇರುವ ಒಂದೇ ಒಂದು ಶಿಕ್ಷಣ ಕ್ಷೇತ್ರಕ್ಕೆ16ನೇ ತಾರೀಖು ನಡೆಯುವ ಚುನಾವಣೆಗೆ 3600 ಕ್ಕೂ ಹೆಚ್ಚಿಗೆ ಸನ್ನದುಗಳನ್ನು ಮುಚ್ಚಲು ಆದೇಶ ಕೊಟ್ಟಿರುವುದು ಅನಗತ್ಯ ಹಾಗೂ ಅವೈಜ್ಞಾನಿಕ. ಇದನ್ನು ಮರು ಪರಿಶೀಲಿಸಲೆಂದು ಖುದ್ದು ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಆದರೆ ನಮ್ಮ ಪರವಾಗಿ ಸೂಕ್ತ ಆದೇಶ ಬಂದಿರುವುದಿಲ್ಲ. ಈ ಕಾರಣದಿಂದ ನಾವು ಹೈಕೋರ್ಟ್‌ ಮೊರೆ ಹೋಗಿದ್ದೆವು. ನ್ಯಾಯಾಧೀಶರು ನಮ್ಮ ಪರ ವಾದವನ್ನು ಆಲಿಸಿದ ನಂತರ 16 ಮತ್ತು 20 ನೇ ತಾರೀಕು ಎರಡು ದಿನಗಳು ಮಾತ್ರ ಬಂದ್ ಮಾಡಬೇಕೆಂಬ ಆದೇಶವನ್ನುಹೊರಡಿಸಿರುತ್ತಾರೆ. ಈ ಸಮಂಜಸವಾದ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ವಕೀಲರಾದ ಅರುಣ್ ಶ್ಯಾಮರವರ ಜೊತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.

Shwetha M