ಕರುನಾಡಿಗೆ ಎಂಟ್ರಿ ಕೊಟ್ಟ ಮೋದಿ – ಕೇಸರಿ ಕೋಟೆಯಲ್ಲಿ ಹೇಗಿದೆ ಸಂಚಲನ..?

ಕರುನಾಡಿಗೆ ಎಂಟ್ರಿ ಕೊಟ್ಟ ಮೋದಿ – ಕೇಸರಿ ಕೋಟೆಯಲ್ಲಿ ಹೇಗಿದೆ ಸಂಚಲನ..?

ವಿಧಾನಸಭಾ ರಣರಂಗದ ಸಮಯ ಹತ್ತಿರವಾಗುತ್ತಿರುವ ಹೊತ್ತಲ್ಲೇ ಕೇಸರಿ ಕೋಟೆಯಲ್ಲಿ ಮಿಂಚಿನ ಸಂಚಲನವಾಗುತ್ತಿದೆ. ಪ್ರಧಾನಿ ನರೇಂದ್ರ ಮತ್ತೊಮ್ಮೆ ಕರುನಾಡಿಗೆ ಎಂಟ್ರಿ ಕೊಟ್ಟಿದ್ದು, ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಮತಬುಟ್ಟಿಗೆ ಕೈ ಹಾಕಲು ಈಗಿನಿಂದಲೇ ತಂತ್ರ ಹೆಣೆಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.  ವಿಶೇಷ ವಿಮಾನದ ಮೂಲಕ ಈಗಾಗಲೇ ಕಲಬುರಗಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿಯನ್ನ ಸ್ವಾಗತಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ನಾಯಕರು ಸಾಥ್ ನೀಡಿದ್ರು. ಆದರೆ ವಿಮಾನ ನಿಲ್ದಾಣದ ಒಳಗೆ ಶಾಸಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ತೆರಳಲು ಬಂದ ಶಾಸಕರಾದ ಬಸವರಾಜ್ ಮತ್ತಿಮೂಡ ಹಾಗೂ ರಾಜಕುಮಾರ್ ಪಾಟೀಲ್​ರನ್ನ ಪೊಲೀಸರು ತಡೆದಿದ್ದಾರೆ. ಈ ವೇಳೆ ಶಾಸಕರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿದೆ.

ಇದನ್ನೂ ಓದಿ:ಎರಡು ಮದುವೆಯಾಗಿದ್ರೆ ಕೆಲಸ ಇಲ್ಲ! – ಏನಿದು ಬಿಬಿಎಂಪಿ ರೂಲ್ಸ್?

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​​ನಲ್ಲಿ ನಡೆಯಲಿರುವ ಸಮಾವೇಶಕ್ಕೆ ಜನರ ದಂಡೇ ಹರಿದು ಬರುತ್ತಿದೆ. ಡೊಳ್ಳು, ಕುಣಿತದ ಮೂಲಕ ಕಲಾವಿದರು ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದಿಂದ 1 ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಸ್ಕಾಡಾ ಗೇಟ್​ಗಳ ಉದ್ಘಾಟನೆ, ಜಲಧಾರೆ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ವೇದಿಕೆ ಮೇಲೆ ತಪಾಸಣೆ ನಡೆಯುತ್ತಿದೆ. ವೇದಿಕೆ ಮತ್ತು ಸುತ್ತಮುತ್ತಲಿನ ಸ್ಥಳದಲ್ಲೇ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸ್ತಿದ್ದಾರೆ.

ಪ್ರಧಾನಿ ಮೋದಿ ಕಲಬುರಗಿಯ ಮಳಖೇಡ್ ನಲ್ಲಿ ಲಂಬಾಣಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ  ಕಾರ್ಯಕ್ರಮದ ಮೂಲಕ ಮತಗಳಿಗೆ ಲೆಕ್ಕಾಚಾರ ಹಾಕಿದೆ. ಮುಖ್ಯ ವೇದಿಕೆ ಮೇಲ್ಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರ, ಬಸವಣ್ಣ, ಸಂತ ಸೇವಾಲಾಲ್, ಕನಕದಾಸರು, ಶರಣ ಹರಳಯ್ಯನವರ ಭಾವಚಿತ್ರ ಇರಿಸಲಾಗಿದೆ. ವೇದಿಕೆ ಮಧ್ಯಭಾಗದಲ್ಲಿ ಪ್ರಧಾನಿ ಮೋದಿ, ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್ ಭಾವಚಿತ್ರ ಇರಲಿದೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​ನಲ್ಲಿ ಇಂದು ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಸಮಾವೇಶಕ್ಕೆ ಬರುವವರಿಗೆ ಪಲಾವ್, ಮೊಸರನ್ನ, ಪಾಯಸ ವ್ಯವಸ್ಥೆ ಮಾಡಲಾಗಿದೆ. ಸುಮಾರು 300 ಕೌಂಟರ್ ಮೂಲಕ ಸಿಬ್ಬಂದಿ ಊಟ ಬಡಿಸಲಿದ್ದಾರೆ. ಸಮಾವೇಶಕ್ಕೆ ಸುಮಾರು 3 ಲಕ್ಷ ಜನ ಬರುವ ನಿರೀಕ್ಷೆ ಇದ್ದು ಊಟ  ತಯಾರಿ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬರುವ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 200 ಗಣ್ಯರಿಗೆ ಸಿಬ್ಬಂದಿ ಊಟ ಸಿದ್ಧಪಡಿಸುತ್ತಿದ್ದಾರೆ. ಸಮಾವೇಶಕ್ಕೆ ಬರುವ ವಿಐಪಿಗಳಿಗೆ ಮೆಂತ್ಯ ಚಪಾತಿ, ಹೋಳಿಗೆ, ಕುರ್ಮಾ, ಹೆಸರುಕಾಳು ಪಲ್ಯ, ಅನ್ನ ಸಾಂಬರ್, ಮೊಸರು ಬಜ್ಜಿ ಸಿದ್ಧವಾಗುತ್ತಿದೆ. ಮಳಖೇಡ್​ನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದವರಿಗೆ ಪಲಾವ್ ಸಿದ್ಧವಾಗುತ್ತಿದೆ. ಐನೂರಕ್ಕೂ ಹೆಚ್ಚು ಸಿಬ್ಬಂದಿ ಅಡುಗೆ ತಯಾರಿ ಮಾಡುತ್ತಿದ್ದಾರೆ.

ಕರ್ನಾಟಕಕ್ಕೆ ಬರುವ ಮುನ್ನವೇ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

suddiyaana