ಮೂಡುಬಿದಿರೆಯಲ್ಲಿ ತುಳುವಿನಲ್ಲೇ ಮಾತು ಆರಂಭಿಸಿದ ಮೋದಿ – ಅಂಕೋಲಾದಲ್ಲಿ ಕಿರೀಟ ತೊಟ್ಟ ಪ್ರಧಾನಿ
ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆ ಪ್ರಚಾರ ಜೋರಾಗಿಯೇ ಸಾಗುತ್ತಿದೆ. ಮೂಡುಬಿದಿರೆಯ ಮುಲ್ಕಿ ಕ್ಷೇತ್ರದಲ್ಲಿ ಸಮಾವೇಶ ನಡೆಸಿದ ಪ್ರಧಾನಿ ನರೇಂದ್ರ ಮೋದಿಗೆ ಕರಾವಳಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ರುದ್ರಾಕ್ಷಿ ಹಾರ, ಕೇಸರಿ ಶಾಲು, ಪೇಟ ತೊಡಿಸಿ ಸನ್ಮಾನಿಸಲಾಯ್ತು. ದಕ್ಷಿಣಕನ್ನಡ ಜಿಲ್ಲೆಯ ವಿಶೇಷ ವಾಸ್ತುಶಿಲ್ಪದ ಗಣಪತಿ ಮೂರ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಕಾಂಗ್ರೆಸ್ ಗೆ ಬಜರಂಗದಳ ಠಕ್ಕರ್ – ನಾಳೆ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ
ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಸುನೀಲ್ ಕುಮಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಜರಂಗಬಲಿ ಕೀ ಜೈ ಎಂದು ಆರಂಭದಲ್ಲಿ ಹೇಳಿ ಭಾಷಣ ಮಾಡಿದ್ದು ವಿಶೇಷವಾಗಿತ್ತು. ಪ್ರತಿ ಚುನಾವಣಾ ಭಾಷಣದಲ್ಲಿ ಮೋದಿ ಆರಂಭದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿ ಭಾಷಣ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಮೂಲ್ಕಿ ಪ್ರಚಾರ ಸಭೆಯಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳಿದ ಬಳಿಕ ತುಳುವಿನಲ್ಲಿ ಮಾತನ್ನು ಆರಂಭಿಸಿದರು. ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣ ಆರಂಭಿಸಿದರು. ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ದಕ್ಷಿಣ ಕನ್ನಡ ಬಿಜೆಪಿ ಮುಂದಾಗಿತ್ತು. ಆದರೆ ನೆರೆದಿದ್ದ ಸಭಿಕರು ಕನ್ನಡ ಭಾಷಾಂತರ ಬೇಡ ಎಂದು ಹೇಳಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು.
ಮೂಲ್ಕಿಯಿಂದ ಅಂಕೋಲಾಗೆ ತೆರಳಿದ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಕರ್ನಾಟಕವನ್ನು ದೇಶದ ನಂಬರ್ ವನ್ ರಾಜ್ಯವನ್ನಾಗಿ ಮಾಡುವ ಸಂಕಲ್ಪ ನಮ್ಮದು ಎಂದು ಪ್ರಧಾನಿ ಮೋದಿ ಹೇಳಿದರು. ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಉತ್ತರ ಕನ್ನಡದ ಖ್ಯಾತ ಯಕ್ಷಗಾನದ ಕಿರೀಟವನ್ನು ಹಾಕಿ ಸನ್ಮಾನ ಮಾಡಲಾಗಿದೆ.