ಚಂದ್ರ ಮೋದಿ ಆಸ್ತಿನಾ..? ಅಧಿಕಾರಕ್ಕೆ ಬಂದಾಗಿಂದ ಹೆಸರು ಬದಲಾವಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ! – ಕಾಂಗ್ರೆಸ್‌ ನಾಯಕರ ಆಕ್ರೋಶ

ಚಂದ್ರ ಮೋದಿ ಆಸ್ತಿನಾ..? ಅಧಿಕಾರಕ್ಕೆ ಬಂದಾಗಿಂದ ಹೆಸರು ಬದಲಾವಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ! – ಕಾಂಗ್ರೆಸ್‌ ನಾಯಕರ ಆಕ್ರೋಶ

ಚಂದ್ರಯಾನ-3 ಸಕ್ಸಸ್‌ನಲ್ಲಿ ಭಾಗಿಯಾದ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆದ ದಿನವಾದ ಆಗಸ್ಟ್‌ 23 ರಂದು ಪ್ರತಿ ವರ್ಷ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಣೆ ಮಾಡಲಿದ್ದೇವೆ. ಚಂದ್ರಯಾನ-2 ವೇಳೆ ವಿಕ್ರಮ್‌ ಲ್ಯಾಂಡರ್‌ ಬಿದ್ದ ಸ್ಥಳವನ್ನು ‘ತಿರಂಗಾ ಪಾಯಿಂಟ್‌’ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ. ಚಂದ್ರಯಾನ-3 ಲ್ಯಾಂಡಿಂಗ್‌ ಸೈಟ್‌ಅನ್ನು ಶಿವಶಕ್ತಿ ಎನ್ನುವ ಹೆಸರಿನಿಂದ ಕರೆಯಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಚಂದ್ರನ ಮೇಲಿನ ಲ್ಯಾಂಡಿಂಗ್‌ ಸೈಟ್‌ಗೆ ಶಿವಶಕ್ತಿ ಎಂದು ನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಆಗಸ್ಟ್​ 23 ʼರಾಷ್ಟ್ರೀಯ ಬಾಹ್ಯಾಕಾಶ ದಿನʼ, ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳ ‘ಶಿವಶಕ್ತಿ’ – ಪ್ರಧಾನಿ ಮೋದಿ ಘೋಷಣೆ

ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ರಶೀದ್‌ ಅಲ್ವಿ, ‘ಮೊದಲಿಗೆ ಇದು ನಗು ತರಿಸುವಂಥ ವಿಚಾರ. ಚಂದ್ರನ ಮೇಲಿರುವ ಪ್ರದೇಶಕ್ಕೆ ಹೆಸರನ್ನು ಇಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಚಂದ್ರನ ಮೇಲೆ ಯಾವುದೇ ಪ್ರದೇಶಕ್ಕೆ ಇವರು ಹೇಗೆ ಹೆಸರು ಇಡುತ್ತಾರೆ? ಒಟ್ಟಾರೆ ಈ ಸಂಗತಿಯೇ ನನಗೆ ನಗು ತರಿಸುತ್ತದೆ. ಚಂದ್ರಯಾನ-3 ಬಗ್ಗೆ ನಮ್ಮ ಇಸ್ರೋ ಮಾಡಿದ ಸಾಧನೆ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ನಾವು ಚಂದ್ರನ ಮಾಲೀಕರಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿಯಾಗಲಿ ಇದರ ಮಾಲೀಕರಲ್ಲ. ಭಾರತಯ ಜನತಾ ಪಾರ್ಟಿಯಲ್ಲಿ ಇಂಥದ್ದೊಂದು ಅಭ್ಯಾಸ ಮೊದಲಿನಿಂದಲೂ ಇದೆ. ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಹೆಸರನ್ನು ಬದಲಾವಣೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂದು ಇಸ್ರೋ ಏನು ಸಾಧನೆ ಮಾಡಿದೆಯೋ ಅದಕ್ಕೆಲ್ಲ ನೆಹರು ಅವರೇ ಕಾರಣ. 1962ರಲ್ಲಿ ಪಂಡಿತ್‌ ಜವಾಹರ್‌ಲಾಲ್‌ ನೆಹರು ಹಾಗೂ ವಿಕ್ರಮ್‌ ಸಾರಾಭಾಯಿ ಇಸ್ರೋ ಸ್ಥಾಪನೆ ಮಾಡುವ ಕನಸು ಕಂಡಿದ್ದರು. ಪಂಡಿತ್‌ ನೆಹರು ನಮ್ಮ ಬಾಹ್ಯಾಕಾಶ ಯೋಜನೆಗಳ ಸಂಸ್ಥಾಪಕರು. ಹಾಗಾಗಿ ಅವರ ಹೆಸರನ್ನು ಚಂದ್ರನ ಸ್ಥಳಕ್ಕೆ ಇಡಲಾಗಿತ್ತು. ಆಗಿನ ವಿಚಾರವೇ ಬೇರೆ ಆಗಿತ್ತು. ಆದರೆ, ಇಂದು ಮೋದಿ ಮಾಡುತ್ತಿರುವುದು ಸಂಪೂರ್ಣವಾಗಿ ರಾಜಕಾರಣ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಹೆಸರು ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಬಿಜೆಪಿ ಪರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಅನ್ನು ಟೀಕೆ ಮಾಡುತ್ತಿದ್ದಾರೆ. ದೇಶದ ಅತಿ ಹಳೆಯ ಮತ್ತು ದೊಡ್ಡ ಪಕ್ಷವೆನಿಸಿಕೊಂಡಿರುವ ಕಾಂಗ್ರೆಸ್ ಜವಹರಲಾಲ್ ನೆಹರೂ ಕುಟುಂಬಕ್ಕೆ ಮೊದಲ ಮನ್ನಣೆ ನೀಡಿದರೆ ಬಿಜೆಪಿಯವರು ದೇಶಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅದಕ್ಕೆ ಪ್ರಧಾನಿ ಮೋದಿಯವರು ಇಂದು ಇಸ್ರೊದ ಚಂದ್ರಯಾನಕ್ಕೆ ಇಟ್ಟಿರುವ ಹೆಸರುಗಳು ಮತ್ತೊಮ್ಮೆ ಸಾಕ್ಷಿಯಾಗಿದೆ  ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

suddiyaana