ಹೆಜ್ಜೆ ಹೆಜ್ಜೆಗೂ ಹೂಮಳೆ.. ಮೋದಿ ಮೋದಿ ಘೋಷಣೆ – ಬೆಳಗಾವಿಯಲ್ಲಿ ಹೇಗಿದೆ ‘ನಮೋ’ ಕಹಳೆ!?

ಹೆಜ್ಜೆ ಹೆಜ್ಜೆಗೂ ಹೂಮಳೆ.. ಮೋದಿ ಮೋದಿ ಘೋಷಣೆ – ಬೆಳಗಾವಿಯಲ್ಲಿ ಹೇಗಿದೆ ‘ನಮೋ’ ಕಹಳೆ!?

ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳ ಹಾರಾಟ. ಹೆಜ್ಜೆ ಹೆಜ್ಜೆಗೂ ಹೂಮಳೆ. ಸುತ್ತ ಮುತ್ತ ಎತ್ತ ನೋಡಿದ್ರೂ ಜನವೋ ಜನ. ಎಲ್ಲೆಲ್ಲೂ ಮೋದಿ ಮೋದಿ ಘೋಷಣೆ. ಕುಂದಾನಗರಿ ಬೆಳಗಾವಿ ಇವತ್ತು ಅಕ್ಷರಶಃ ಬಿಜೆಪಿಮಯವಾಗಿತ್ತು. ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು ಈಗಲೇ ರಾಜಕೀಯ ಅಖಾಡ ರಂಗೇರುತ್ತಿದೆ.

ಶತಾಯ ಗತಾಯ ಬಿಜೆಪಿಯನ್ನ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕು ಅಂತಾ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಂತಿದೆ. ಅಭಿವೃದ್ಧಿ ಹೆಸರಿನಲ್ಲಿ ಬ್ಯಾಕ್ ಟು ಬ್ಯಾಕ್ ಎಂಟ್ರಿ ಕೊಡ್ತಿದ್ದಾರೆ. ಅದ್ರಲ್ಲೂ ಇವತ್ತಂತೂ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಅಲೆ ಎದ್ದಿತ್ತು. ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಮೋದಿ ಬಳಿಕ ಸೇನಾ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ​ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಸ್ವಾಗತಿಸಿದರು.

ಇದನ್ನೂ ಓದಿ : ‘ಬರ ಇದ್ದಾಗ ಬರಲೇ ಇಲ್ಲ ಎಲೆಕ್ಷನ್ ಹತ್ತಿರ ಬಂದಾಗ ವಾರಕ್ಕೊಂದು ಪ್ರವಾಸ’- ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

ಬಳಿಕ ಚೆನ್ನಮ್ಮ ವೃತ್ತದಿಂತ 10 ಕಿಲೋ ಮೀಟರ್ ರೋಡ್ ಶೋ ನಡೆಸಿದ್ರು. ಪ್ರಧಾನಿ ಮೋದಿ ಸಾಗಿದಂತೆಲ್ಲಾ ಬಣ್ಣ-ಬಣ್ಣದ ಹೂಗಳಿಂದ ಪುಷ್ಪವೃಷ್ಟಿ ಮಾಡಲಾಯ್ತು. ಬರೋಬ್ಬರಿ 10 ಕ್ವಿಂಟಾಲ್​​​​ ಹೂವುಗಳಿಂದ ಹೂಮಳೆ ಸುರಿಸಲಾಯ್ತು. KSRP ಮೈದಾನ-ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಕಪಿಲೇಶ್ವರ ಮಂದಿರ ಮೇಲ್ಸೆತುವೆ, ಶಹಾಪುರ ರಸ್ತೆ, ಶಿವಚರಿತ್ರೆ ರಸ್ತೆ, ಓಲ್ಡ್​ ಪಿಬಿ ರಸ್ತೆ, ಯಡಿಯೂರಪ್ಪ ಮಾರ್ಗದಿಂದ ಮಾಲಿನಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬೆಳಗಾವಿಗೆ ಭೇಟಿ ನೀಡಿರುವ ಪ್ರಧಾನಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. 8 ಲಕ್ಷ ರೈತರ ಖಾತೆಗಳಿಗೆ ₹16 ಸಾವಿರ ಕೋಟಿ ಹಣ ಜಮೆಯಾಗಲಿದೆ. ಹಾಗೇ ₹1,132 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೂ ಚಾಲನೆ ನೀಡಲಿದ್ದಾರೆ. 198 ಕೋಟಿ ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣವನ್ನ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

suddiyaana