ದೇಶದ ಮೊದಲ ವಾಟರ್ ಮೆಟ್ರೋಗೆ ಮೋದಿ ಚಾಲನೆ – ಏನಿದರ ವಿಶೇಷತೆ ?

ದೇಶದ ಮೊದಲ ವಾಟರ್ ಮೆಟ್ರೋಗೆ ಮೋದಿ ಚಾಲನೆ – ಏನಿದರ ವಿಶೇಷತೆ ?

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಮೆಟ್ರೋ ರೈಲು ಮಾರ್ಗ ವಿಸ್ತರಣೆಯಾಗುತ್ತಲೇ ಇದೆ. ವಾಹನ ದಟ್ಟಣೆ ಕಡಿಮೆಗೊಳಿಸೋಕೆ, ಟ್ರಾಫಿಕ್​​ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳೋಕೆ ಮೆಟ್ರೋ ಹೇಳಿ ಮಾಡಿಸಿದ್ದು. ಇಷ್ಟು ದಿನ ಕೇವಲ ಹಳಿ ಮೇಲೆ ಸಾಗುತ್ತಿದ್ದ ಮೆಟ್ರೋ ಈಗ ನೀರಿನಲ್ಲೂ ಸಂಚರಿಸೋಕೆ ಶುರುವಾಗಿದೆ. ಜಲ ಮಾರ್ಗದಲ್ಲೂ ಮೆಟ್ರೋ ಸಂಚಾರ ಆರಂಭವಾಗಿದೆ. ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆಯಾಗಿದೆ. ದೇಶದ ಮೊದಲ ವಾಟರ್ ಮೆಟ್ರೋಗೆ ಮೋದಿ ಚಾಲನೆ ನೀಡಿದರು.

ಕೇರಳದ ಕೊಚ್ಚಿಯಲ್ಲಿ ದೇಶದ ಮೊಟ್ಟ ಮೊದಲ ವಾಟರ್ ಮೆಟ್ರೋ ಸರ್ವಿಸ್ ಆರಂಭವಾಗಿದೆ. ಅಂದರೆ, ನೀರಲ್ಲೇ ಸಂಚರಿಸುವ ಮೆಟ್ರೋ. ಹೇಳಿಕೇಳಿ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ರಾಜ್ಯ. ಟೂರಿಸಂ ಕೇರಳ ಆರ್ಥವ್ಯವಸ್ಥೆಯ ಮೂಲ ಆದಾಯ. ಸಮುದ್ರ, ಹಿನ್ನೀರಿನಿಂದಲೇ ಆವೃತವಾಗಿರುವ ದೇವರ ನಾಡಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬೂಸ್ಟ್ ನೀಡೋಕೆ ಕೇರಳ ಸರ್ಕಾರ ವಾಟರ್ ಮೆಟ್ರೋ ಸರ್ವಿಸ್​​ನ್ನ ಜಾರಿಗೊಳಿಸಿದೆ.

ಕೇರಳದ ಕೊಚ್ಚಿ ನಗರದ ಸುತ್ತಲೂ ಹಲವಾರು ದ್ವೀಪಗಳಿವೆ. ಈ ಪೈಕಿ 10 ದ್ವೀಪಗಳಿಗೆ ಇನ್ಮುಂದೆ ವಾಟರ್​ ಮೆಟ್ರೋದಲ್ಲೇ ಸಂಚಾರ ಮಾಡಬಹುದು. ಇದುವರೆಗೆ ದೋಣಿ, ಬೋಟ್​​ನ್ನ ಅವಲಂಬಿಸಿದ್ದ ಜನರು ಈಗ ಮೆಟ್ರೋ ಮೂಲಕವೇ ಓಡಾಡಬಹುದು. 10 ದ್ವೀಪಗಳ ಮಧ್ಯೆ ಒಟ್ಟು 38 ಟರ್ಮಿನಲ್​ಗಳನ್ನ ನಿರ್ಮಿಸಲಾಗಿದೆ. ಈ ಎಲ್ಲಾ ಟರ್ಮಿನಲ್​​ಗಳಲ್ಲೂ ವಾಟರ್ ಮೆಟ್ರೋ ಸ್ಟಾಪ್ ಕೊಡುತ್ತೆ. ಇದೇ ಟರ್ಮಿನಲ್​​ಗಳ ಮೂಲಕ ಜನರು ಮೆಟ್ರೋ ಏರಬಹುದಾಗಿದೆ. ಇನ್ನು ಈ ಟರ್ಮಿನಲ್​ಗಳು ಕೂಡ ಅಷ್ಟೇ, ವಾಟರ್​ ಮೆಟ್ರೋದ ಲೆವೆಲ್​ಗೆ ಇರುತ್ತೆ. ಹೀಗಾಗಿ ಮೆಟ್ರೋ ಏರೋವಾಗ, ಇಳಿಯುವಾಗ ಯಾವುದೇ ರಿಸ್ಕ್​ ಇರೋದಿಲ್ಲ.

ಇನ್ನು ವಾಟರ್​ ಮೆಟ್ರೋ ಸೇವೆಗೆ ಎಲೆಕ್ಟ್ರಿಕ್ ಹೈಬ್ರೀಡ್ ಬೋಟ್​ಗಳನ್ನ ಬಳಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಈ ಬೋಟ್​​ ಅಷ್ಟೇ ಸುರಕ್ಷಿತ. ಈ ಬೋಟ್​ನಲ್ಲಿ ಏರ್​ಕಂಡೀಷನ್ ವ್ಯವಸ್ಥೆ ಕೂಡ ಇದೆ. ದೊಡ್ಡದಾದ ಕಿಟಕಿಗಳನ್ನ ಅಳವಡಿಸಲಾಗಿದ್ದು, ಹೀಗಾಗಿ ಕೊಚ್ಚಿನ್​​ ಬ್ಯಾಕ್​ವಾಟರ್​ ಸೌಂದರ್ಯವನ್ನ ಕೂಡ ಕಣ್ತುಂಬಿಕೊಳ್ಳಬಹುದು.

ವಾಟರ್​ ಮೆಟ್ರೋ ಸಂಚಾರದ ಶುಲ್ಕ ಕೂಡ ಬಜೆಟ್ ಫ್ರೆಂಡ್ಲಿಯಾಗಿಯೇ ಇದೆ. ಸಿಂಗಲ್ ಜರ್ನಿ ಟಿಕೆಟ್, ವಾರದ, ತಿಂಗಳ ಮತ್ತು ಮೂರು ತಿಂಗಳಿಗೆ ಪ್ರತ್ಯೇಕ ಪಾಸ್​​ ವ್ಯವಸ್ಥೆ ಕೂಡ ಮಾಡಲಾಗಿದೆ. ಸಿಂಗಲ್​ ಜರ್ನಿಗೆ ಮಿನಿಮಮ್ ಟಿಕೆಟ್ ದರ 20 ರೂಪಾಯಿ. ವಾರದ ಪಾಸ್ ಬೇಕು ಅನ್ನೋದಾದ್ರೆ, ಒಂದು ವಾರದ ಟ್ರಿಪ್​ನಲ್ಲಿ ಒಟ್ಟು 12 ಬಾರಿ ವಾಟರ್​ ಮೆಟ್ರೋದಲ್ಲಿ ಸಂಚರಿಸಬಹುದು. ಇದಕ್ಕೆ 180 ರೂಪಾಯಿ ವೆಚ್ಚವಾಗುತ್ತೆ. ಇನ್ನು ತಿಂಗಳ ಟ್ರಿಪ್​ ಪಾಸ್​ಗೆ 50 ಬಾರಿ ಓಡಾಡಬಹುದು. ಇದ್ರೆ ಟಿಕೆಟ್ ದರ 600 ರೂಪಾಯಿ. ಇನ್ನು ಮೂರು ತಿಂಗಳ ಪಾಸ್​ಗೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತೆ. 90 ದಿನಗಳ ಕಾಲ 150 ಬಾರಿ ಓಡಾಡಬಹುದು.

ಕೊಚ್ಚಿನ್​ನಲ್ಲಿ ಒಟ್ಟು ಎರಡು ಮಾರ್ಗಗಳಲ್ಲಿ ವಾಟರ್​ ಮೆಟ್ರೋ ಸಂಚರಿಸುತ್ತೆ. ಹೈಕೋರ್ಟ್​ನಿಂದ ವಿಪಿನ್ ಅನ್ನೋ ದ್ವೀಪ ಮತ್ತು ವಿಟ್ಟಿಲದಿಂದ ಕಾಕ್ಕನಾಡು ಎಂಬಲ್ಲಿಗೆ ಮೆಟ್ರೋ ಸಂಚಾರವಿರುತ್ತೆ. ಇವರೆಡರ ಮಧ್ಯೆ ಸಿಗೋ ದ್ವೀಪಗಳನ್ನ ಕೂಡ ವಾಟರ್​​ ಮೆಟ್ರೋ ಮೂಲಕ ಕನೆಕ್ಟ್ ಮಾಡಲಾಗಿದೆ. ಕ್ಯೂ ಆರ್​​ ಕೋಡ್​ ಬಳಸಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು.

ಇನ್ನು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕೊಚ್ಚಿನ್​ನಲ್ಲಿ ವಾಟರ್​​ ಮೆಟ್ರೋ ಸರ್ವಿಸ್ ಲಭ್ಯವಿರುತ್ತೆ. ಅದ್ರಲ್ಲೂ ಪೀಕ್ ಹವರ್​​ಗಳಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ಬೋಟ್​​ ಸಂಚರಿಸುತ್ತವೆ. ಇನ್ನು ಕೊಚ್ಚಿ ವನ್ ಕಾರ್ಡ್ ಹೊಂದಿರುವವರು ಮೆಟ್ರೋ ರೈಲು ಮತ್ತು ವಾಟರ್​ ಮೆಟ್ರೋದಲ್ಲೂ ಸಂಚಾರ ಮಾಡಬಹುದಾಗಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕನಸಿನ ಯೋಜನೆ ಇದಾಗಿದ್ದು, ಸುಮಾರು 1,136 ಕೋಟಿ ರೂಪಾಯಿ ವೆಚ್ಚದಲ್ಲಿ ವಾಟರ್​ ಮೆಟ್ರೋ ಸರ್ವಿಸ್ ಆರಂಭಿಸಲಾಗಿದೆ. ಸದ್ಯ ಒಟ್ಟು 78 ಎಲೆಕ್ಟ್ರಿಕ್ ಬೋಟ್​ಗಳು

10 ದ್ವೀಪಗಳ ಮಧ್ಯೆ ಸಂಚರಿಸಲಿವೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಕರಾವಳಿ ತೀರವನ್ನ ಹೊಂದಿದೆಯಾದ್ರೂ, ಹಿನ್ನೀರಿನ ಲಾಭ ಪಡೆಯುವಲ್ಲಿ ರಾಜ್ಯ ಸರ್ಕಾರಗಳು ಅಷ್ಟೊಂದು ಗಮನ ವಹಿಸಿಲ್ಲ. ಆಸಕ್ತಿಯನ್ನೂ ತೋರಿಲ್ಲ. ಹಿನ್ನೀರನ್ನ, ಜಲಮಾರ್ಗವನ್ನ ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು ಅನ್ನೋದಕ್ಕೆ ಕೇರಳ ಸರ್ಕಾರದ ಈ ವಾಟರ್​ ಮೆಟ್ರೋ ಯೋಜನೆಯೇ ಸಾಕ್ಷಿ. ಇದ್ರಿಂದ ಜನರ ಸಂಚಾರಕ್ಕೆ ಅನುಕೂಲವಾಗೋದ್ರ ಜೊತೆಗೆ ರಸ್ತೆಯಲ್ಲಿ ವಾಹನ ದಟ್ಟಣೆಯೂ ಕಡಿಮೆಯಾಗುತ್ತೆ. ಜೊತೆಗೆ ಪ್ರವಾಸೋದ್ಯಮ ಕೂಡ ಬೆಳೆಯುತ್ತೆ. ಹೀಗಾಗಿ ಕೇರಳದ ಈ ಮಾದರಿ ಯೋಜನೆಯನ್ನ ದೇಶಾದ್ಯಂತ ಜಾರಿಗೊಳಿಸೋ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕಿದೆ.

suddiyaana