ಐಐಟಿ, ರೈಲ್ವೆ ಪ್ಲಾಟ್ ಫಾರ್ಮ್ ಸೇರಿ ವಿವಿಧ ಯೋಜನೆಗಳಿಗೆ ಚಾಲನೆ – ಧಾರವಾಡದಲ್ಲಿ ಮೋದಿ ರೌಂಡ್ಸ್ ಹೇಗಿರುತ್ತೆ..?
ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಪದೇಪದೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಲೆ ಎಬ್ಬಿಸುತ್ತಿದ್ದಾರೆ. ಭಾನುವಾರ (ಮಾರ್ಚ್ 12)ರಂದು ಮೈಸೂರು ಬೆಂಗಳೂರು ಹೆದ್ದಾರಿ ಉದ್ಘಾಟನೆ ನೀಡಲಿದ್ದು ಬಳಿಕ ಧಾರವಾಡಕ್ಕೆ ತೆರಳಲಿದ್ದಾರೆ.
ಮಂಡ್ಯ ಜಿಲ್ಲೆಯ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಮೋದಿ ಹುಬ್ಬಳ್ಳಿಗೆ ತೆರಳಲಿದ್ದಾರೆ. ಹುಬ್ಬಳ್ಳಿ ಏರ್ ಪೋರ್ಟ್ನಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಧಾರವಾಡ ಐಐಟಿ ನೂತನ ಕಟ್ಟಡ, ಏಷ್ಯಾದ ಅತಿ ಉದ್ದದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾರ್ಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐಐಟಿ-ಧಾರವಾಡ ಕ್ಯಾಂಪಸ್ ಹೊರಗೆ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗೆ 312 ಕೋಟಿ ರೂ ವೆಚ್ಚವಾಗಿದೆ ಮತ್ತು 150 ಕೋಟಿ ರೂ.ಗಳ ವರ್ಕ್ ಆರ್ಡರ್ ನೀಡಲಾಗಿದೆ.
ಇದನ್ನೂ ಓದಿ : ‘ಬರ ಇದ್ದಾಗ ಬರಲೇ ಇಲ್ಲ ಎಲೆಕ್ಷನ್ ಹತ್ತಿರ ಬಂದಾಗ ವಾರಕ್ಕೊಂದು ಪ್ರವಾಸ’- ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ
ಹಾಗೇ 250 ಕೋಟಿ ರೂ.ಗಳ ಜಯದೇವ ಹೃದ್ರೋಗ ಸಂಸ್ಥೆ ಮತ್ತು 144 ಗ್ರಾಮ ಪಂಚಾಯಿತಿಗಳಿಗೆ ನಲ್ಲಿ ನೀರು ಒದಗಿಸುವ 1,200 ಕೋಟಿ ರೂ.ಗಳ ಜಲ ಜೀವನ್ ಮಿಷನ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 42 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 295 ವಿವೇಕ್ ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ. ವೆಚ್ಚದ 15 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ 166 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಹುಬ್ಬಳ್ಳಿ-ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಕೂಡ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದಲೇ ಎರಡು ಲಕ್ಷಕ್ಕೂ ಅಧಿಕ ಜನರು ಜಮಾಯಿಸುವ ನಿರೀಕ್ಷೆ ಇದೆ.
ಈಗಾಗಲೇ ಕಾರ್ಯಕ್ರಮಗಳಿಗೆ ಸಚಿವರು, ಉಸ್ತುವಾರಿಗಳು, ಶಾಸಕರು, ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನು, ಈ ವರ್ಷ ವಿಶ್ವ ಸಿರಿ ಧಾನ್ಯ ವರ್ಷಾಚರಣೆ ಎಂದು ಘೋಷಿಸಿರುವ ಹಿನ್ನೆಲೆ ಸಿರಿಧಾನ್ಯಗಳ ಮೂಲಕವೇ ಪ್ರಧಾನಿಯವರನ್ನು ಸ್ವಾಗತಿಸಲು ತಯಾರಿ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರು ವಿವಿಧ ವೇಷಭೂಷಣದ ಮೂಲಕ ಸ್ವಾಗತ ಮಾಡಲಿದ್ದಾರೆ.
ಮೋದಿ ಅವರ ಈ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಐಐಟಿ ಕಟ್ಟಡದ ಮುಂಭಾಗದಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 4 ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, 200ಕ್ಕೂ ಹೆಚ್ಚು ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ಕ್ಯಾಂಪಸ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಅದಕ್ಕಾಗಿ ಐಐಟಿ ಕ್ಯಾಂಪಸ್ ಒಳಗಡೆಯೇ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ.
ಮೋದಿ ಭೇಟಿ ಹಿನ್ನೆಲೆ ಭದ್ರತೆಗಾಗಿ ಪೊಲೀಸ್ (Police) ಸರ್ಪಗಾವಲು ಹೆಚ್ಚಿಸಲಾಗಿದೆ. ಐವರು ಎಸ್‌ಪಿಗಳನ್ನೊಳಗೊಂಡು ಒಟ್ಟು 2 ಸಾವಿರ ಪೊಲೀಸರನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಐವರು ಎಸ್‌ಪಿ, 8 ಜನ ಅಡಿಷನಲ್ ಎಸ್‌ಪಿ, 28 ಡಿವೈಎಸ್‌ಪಿ, 63 ಸಿಪಿಐಗಳು, 125 ಪಿಎಸ್ಐಗಳು, 158 ಎಎಸ್‌ಐಗಳು, 1,484 ಕಾನ್ಸ್‌ಟೇಬಲ್‌ಗಳು, 10 ಡಿಆರ್ ತುಕಡಿಗಳು, 15 ಕೆಎಸ್‌ಆರ್‌ಪಿ ತುಕಡಿಗಳನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.